ಬೆಂಗಳೂರು
ಬೆಂಗಳೂರು ಹೊರವಲಯ ಜಿಗಣಿಯಲ್ಲಿ ಪಾಕ್ ಪ್ರಜೆಗಳ ಬಂಧನಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣದ ತನಿಖೆಯನ್ನು ಜಿಗಣಿ ಪೊಲೀಸರು ಪೂರ್ಣಗೊಳಿಸಿ ಆನೇಕಲ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 22 ಮಂದಿ ಬಂಧಿತ ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆ ಪೂರ್ಣಗೊಳಿಸಿರುವ ಪೊಲೀಸರು 1200ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಹಲವು ಮಹತ್ವದ ವಿಚಾರಗಳು ಉಲ್ಲೇಖವಾಗಿವೆ. ಪ್ರಕರಣದ ಪ್ರಮುಖ ಆರೋಪಿ ರಶೀದ್ ಅಲಿ ಸಿದ್ದಿಕ್ಕಿ ಪಾಕಿಸ್ತಾನ ಮೂಲದವನೆಂದು ಸಾಬೀತಾಗಿದೆ. ಆರೋಪಿ ರಶೀದ್ ಅಲಿ ಸಿದ್ದಿಕ್ಕಿ ಬಳಿ ಪಾಕಿಸ್ತಾನದ ಶಾಶ್ವತ ನಿವಾಸ ಪ್ರಮಾಣಪತ್ರ ಪತ್ತೆಯಾಗಿದೆ.
22 ಮಂದಿ ಆರೋಪಿಗಳಲ್ಲಿ ಪುರುಷರು, ಮಹಿಳೆಯರು ಮತ್ತು ಬಾಲಕಿ ಇದ್ದಾಳೆ. ಈ ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದ ಮೂಲಕ ಆರೋಪಿಗಳು ಪಾಕಿಸ್ತಾನ ತೊರೆದು ಭಾರತದ ಕಡೆ ಮುಖ ಮಾಡಿದ್ದರು. ವೀಸಾ, ಪಾಸ್ ಪೋರ್ಟ್ ಇಲ್ಲದೆ ಅಕ್ರಮವಾಗಿ ಭಾರತದೊಳಗೆ ನುಸುಳಿದ್ದರು. ದೆಹಲಿಯಲ್ಲಿ ನಕಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲದೇ ಭಾರತದ ಪಾಸ್ ಪೋರ್ಟ್ ಸಹ ಮಾಡಿಕೊಂಡಿರುವುದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಗ್ರಾಮದ ಸಮೀಪ ಪಾಕಿಸ್ತಾನಿ ಪ್ರಜೆಗಳು ಅಪ್ನಾ ಅನಗಾ ಲೇಔಟ್‌ನಲ್ಲಿ ವಾಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ವಿಚಾರಣೆ ವೇಳೆ ಪಾಕಿಸ್ತಾನದ ಲಾಹೋರ್ ಮೂಲದವರು ಅನ್ನೋದು ಖಚಿತವಾಗಿತ್ತು. ಮೆಹದಿ ಫೌಂಡೇಶನ್‌ನ ಧರ್ಮ ಪ್ರವಚನ ಪ್ರಚಾರ ಮಾಡ್ತಿದ್ದು, ಖಾಸಗಿ ವಾಹಿನಿ ಮೂಲಕ ಪ್ರಚಾರ ಕಾರ್ಯ ನಡೆಸ್ತಾ ಇದ್ದರು.
