ನಿಗಮ ಸದಸ್ಯ, ನಿರ್ದೇಶಕರ ನೇಮಕ ವಿಚಾರ ಸದ್ಯಕ್ಕೆ ಮುಗಿದ ಅಧ್ಯಾಯ…!

ಬೆಂಗಳೂರು :

    ಬಹು ನಿರೀಕ್ಷಿತ ನಿಗಮ, ಮಂಡಳಿ ಸದಸ್ಯರು ಮತ್ತು ನಿರ್ದೇಶಕರ ನೇಮಕ ಸದ್ಯಕ್ಕೆ ಮುಗಿದ ಅಧ್ಯಾಯವಾಗುವ ಲಕ್ಷಣಗಳು ಗೋಚರಿಸಿವೆ. ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗಿಂತ ಅಪ್ತರು, ಬಲಗೈ ಬಂಟರು ಹಾಗೂ ಸಂಬಂಧಿ ಕರೇ ಹೆಚ್ಚಾಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಬಹುತೇಕ ಸಿದ್ಧವಾಗಿರುವ ಪಟ್ಟಿಯನ್ನು ಪರಿಷ್ಕರಿಸುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸೂಚನೆಯಂತೆ ಏನಾದರೂ ಇಡೀ ಪಟ್ಟಿಯನ್ನು ಎಲ್ಲಾ ಹಂತಗಳಲ್ಲೂ ಪುನರ್ ಆಯ್ಕೆ ನಡೆಸಿದರೆ ನೇಮಕದ ವಿಚಾರ ಮುಗಿದ ಅಧ್ಯಾಯವಾಗಲಿದೆ ಎಂದು ಕೆಪಿಸಿಸಿ ಆಪ್ತ ಮೂಲಗಳು ತಿಳಿಸಿವೆ.

    ಅಂದರೆ, ಸುಮಾರು 85ಕ್ಕೂ ಹೆಚ್ಚಿನ ನಿಗಮ, ಮಂಡಳಿಗಳ ಸದಸ್ಯರು ಹಾಗೂ ನಿರ್ದೇಶಕ ರನ್ನು ನೇಮಕ ಮಾಡುವ ಸಂಬಂಧ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದ ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಿತಿ ಇನ್ನೆರಡು ಸಭೆಗಳನ್ನು ನಡೆಸಿ ಪಟ್ಟಿಯನ್ನು ಅಂತಿಮ ಗೊಳಿಸಬೇಕು ಎನ್ನುವಷ್ಟರಲ್ಲಿ ಸದಸ್ಯರು ಮತ್ತು ನಿರ್ದೇಶಕರ ಆಕಾಂಕ್ಷಿಗಳಿಗೆ ಆಘಾತದ ಸುದ್ದಿ ಹೊರ ಬಿದ್ದಿದೆ. 

   ಅದೇ ಆಯ್ಕೆ ಪಟ್ಟಿಯ ಪುನರ್ ರಚನೆಯ ಆದೇಶ. ಈ ಬೆಳವಣಿಗೆಯಿಂದಾಗಿ ಈಗ ಎಲ್ಲಾ ಶಾಸಕರು ಹೊಸ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಪಟ್ಟಿಗಳನ್ನು ನೀಡಬೇಕಿದ್ದು, ಅದನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಒಳಪಡಿಸಬೇಕಿದೆ. ಈ ಪಟ್ಟಿಯನ್ನು ಮುಂದಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತಿಮಗೊಳಿಸಬೇಕಿದೆ. ಹೀಗಾಗಿ ಪಕ್ಷದೊಳಗಿನ ಈ ಬೆಳವಣಿಗೆ ಯಿಂದ ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತ ವಾಗಿದ್ದು, ಇದನ್ನು ಶಾಸಕರ ಮೂಲಕವೇ ಆಂತರಿಕವಾಗಿ ಪ್ರತಿಭಟಿಸಲು ಆಕಾಂಕ್ಷಿಗಳು ನಿರ್ಧರಿಸಿದ್ದಾರೆ.

   ಈ ಬೆಳವಣಿಗೆಯೊಂದಿಗೆ ನಿಗಮಗಳ ಸದಸ್ಯರು ಮತ್ತು ನಿರ್ದೇಶಕರ ನೇಮಕ ಕನಿಷ್ಠ 6 ತಿಂಗಳ ವರೆಗೂ ಮುಂದಕ್ಕೆ ಹೋಗಬಹುದಾಗಿದ್ದು, ಬಹುತೇಕ ನಿಗಮಗಳ ಅಧ್ಯಕ್ಷರ ಅವಧಿ ಮುಕ್ತಾಯವಾಗುವವರೆಗೂ ನೇಮಕ ನಡೆಯುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. 

   ನಿಗಮಗಳ ಸದಸ್ಯರು, ನಿರ್ದೇಶಕರ ಪಟ್ಟಿಯನ್ನು ಪುನರ್ ರಚಿಸಬೇಕೆನ್ನುವ ಕೆಪಿಸಿಸಿ ಅಧ್ಯಕ್ಷರ ಈ ಕ್ರಮವನ್ನು ಕೆಲವು ಮುಖಂಡರು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಮೆಚ್ಚಿಕೊಂಡಿದ್ದಾರೆ. ಅಂದರೆ ಮಾರ್ಗಸೂಚಿ ಪ್ರಕಾರ ಶಾಸಕರು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಅದನ್ನು ಪರಮೇಶ್ವರ್ ಸಮಿತಿ ಮುಂದೆ ಸಲ್ಲಿಸಿದ್ದಾರೆ. ಅದನ್ನು ಸಮಿತಿಯ ಉಸ್ತುವಾರಿಯೊಬ್ಬರು ಪರಿಶೀಲಿಸಿ ನಂತರ ಅಂತಿಮ ಪಟ್ಟಿಗೆ ಸೇರಿಸಿದ್ದಾರೆ. ಈ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ಸದ್ಯ ಸಿದ್ಧವಾಗಿರುವ ಪಟ್ಟಿಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು, ಹೋರಾಟ ನಡೆಸಿ ಕೇಸು ದಾಖಲಿಸಿಕೊಂಡವರು ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದು, ಅದನ್ನು ತ್ಯಾಗ ಮಾಡಿದವರಿಗೆ ಅವಕಾಶ ನೀಡಿಲ್ಲ.

   ಬದಲಾಗಿ ಶಾಸಕರ ಬಲಗೈ ಬಂಟರು, ಗುತ್ತಿಗೆದಾರರು, ಇತ್ತೀಚಿಗೆ ಕಾಂಗ್ರೆಸ್ ಸೇರಿದವರು, ಶಾಸಕರ ಆಪ್ತ ವ್ಯವಹಾರಗಳನ್ನು ನೋಡಿಕೊಳ್ಳುವವರಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ಅನೇಕ ಶಾಸಕರ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವಿಚಾರ ಇತ್ತೀಚಿಗೆ ನಡೆದ ಶಾಸಕಾಂಗ ಸಭೆ ಯಲ್ಲೂ ಚರ್ಚೆಯಾಗಿ, ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದರು ಎಂದೂ ಕಾಂಗ್ರೆಸ್ ನ ಆಪ್ತ ಮೂಲಗಳು ತಿಳಿಸಿವೆ. 

   ರಾಜ್ಯ ಸರಕಾರ 85ಕ್ಕೂ ಬೋರ್ಡ್ ಮತ್ತು ಕಾರ್ಪೋರೇಷನ್ ಗಳ ಅಧ್ಯಕ್ಷರ ನೇಮಕ ಮಾಡಿ ವರ್ಷಕ್ಕೂ ಹೆಚ್ಚಿನ ಸಮಯವಾಗಿದೆ. ಆದರೂ ಬೋರ್ಡ್ ಮತ್ತು ಕಾರ್ಪೋರೇಷನ್ ನೇಮಕಗಳ ಬಡಿದಾಟ ಮಾತ್ರ ಇನ್ನೂ ನಿಂತಿಲ್ಲ. ಅಂದರೆ, ಈಗಾಗಲೇ ಅಧ್ಯಕ್ಷರು ಇರುವ ಬೋರ್ಡ್ ಗಳಿಗೆ ಸದಸ್ಯರು ಮತ್ತು ನಿರ್ದೇಶಕರನ್ನು ನೇಮಿಸಿ ಆ ಮೂಲಕ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪಕ್ಷಕ್ಕಾಗಿ ದುಡಿದ ಮುಖಂಡರಿಗೆ ಆಡಳಿತದಲ್ಲಿ ಭಾಗಿಯಾಗು ವಂತೆ ಮಾಡಬೇಕೆಂದು ಕೆಪಿಸಿಸಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ತಯಾರಿಸಿ ಪರಿಶೀಲಿಸಿ ಆಯ್ಕೆ ಮಾಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

   ಅದರಲ್ಲೂ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಶರಣಪ್ರಕಾಶ್ ಪಾಟೀಲ, ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೇರಿದಂತೆ 11 ಮಂದಿ ಮುಖಂಡರಿದ್ದಾರೆ. ಇದಕ್ಕಾಗಿ ರಚಿಸಲಾಗಿದ್ದ ಮಾರ್ಗಸೂಚಿಯಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯ ಮಂತ್ರಿ ಅವರು ತಲಾ 75 ಮಂದಿಯನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು. ಹಾಗೆಯೇ ಸಚಿವರಿಗೆ ತಲಾ 5, ಸಂಸದರು ಮತ್ತು ಶಾಕರಿಗೆ ತಲಾ ಮೂರು, ಎಂಎಲ್ ಸಿಗಳಿಗೆ ತಲಾ 2 ಮಂದಿ ನೇಮಕ ಮಾಡಬಹುದಾಗಿತ್ತು. ಇದರ ಪ್ರಕಾರ ಆಕಾಂಕ್ಷಿಗಳಿಂದ ಸಲ್ಲಿಕೆಯಾಗಿದ್ದ 3500 ಕ್ಕೂ ಹೆಚ್ಚಿನ ಅರ್ಜಿಗಳನ್ನು ಪರಿಶೀಲಿಸಿ ಸುಮಾರು 11180 ಮಂದಿಯನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿತ್ತು. ಇದರ ಬಗ್ಗೆ ಮೂರ್ನಾಲ್ಕು ಸಭೆಗಳೂ ನಡೆದು ಅಂತಿಮವಾಗಿ ಪರಮೇಶ್ವರ ಅವರು ಪಟ್ಟಿಯನ್ನು ಅಂತಿಮಗೊಳಿಸಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸ ಬೇಕಿತ್ತು.

Recent Articles

spot_img

Related Stories

Share via
Copy link