ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಗಳಿಗೆ ತಮಿಳು ಕಡ್ಡಾಯ: ಮದ್ರಾಸ್ ಹೈಕೋರ್ಟ್

ಚೆನ್ನೈ:

    ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ರಾಜ್ಯದ ನಡುವಿನ ವಿವಾದ ಮುಂದುವರೆದಿದೆ. ರಾಜ್ಯದ ರಾಜಕೀಯ, ಚಲನಚಿತ್ರ ರಂಗದ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರು ತ್ರಿಭಾಷಾ ತತ್ವದ ಅನುಷ್ಠಾನವನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

    ತಮಿಳು ಭಾಷೆಯಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ತಮಿಳುನಾಡು ವಿದ್ಯುತ್ ಮಂಡಳಿ (ಟಿಎನ್‌ಇಬಿ) ತನ್ನನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಆರೋಪಿಸಿ ಎಂ. ಜಯಕುಮಾರ್ ಎಂಬ ವ್ಯಕ್ತಿ ಮದ್ರಾಸ್ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ತನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸಿಬಿಎಸ್‌ಇ ಶಾಲೆಗಳಲ್ಲಿ ಓದಿದ್ದೇನೆ, ಆದ್ದರಿಂದ ತಮಿಳು ಕಲಿಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತು.

    ತಮಿಳುನಾಡು ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳನ್ನು ಬಯಸುವ ಅಭ್ಯರ್ಥಿಗಳು ತಮಿಳು ಓದಲು ಮತ್ತು ಬರೆಯಲು ಕಲಿಯುವುದು ಕಡ್ಡಾಯ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಹೇಳಿದೆ. ಸರ್ಕಾರಿ ಉದ್ಯೋಗಗಳಿಗೆ ತಮಿಳು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ. ಸದಾ ಜನರ ನಡುವೆ ಇದ್ದು ಕೆಲಸ ಮಾಡಬೇಕಾದ ಸರ್ಕಾರಿ ನೌಕರರಿಗೆ ತಮ್ಮ ಮಾತೃಭಾಷೆಯಾದ ತಮಿಳು ಗೊತ್ತಿಲ್ಲದಿದ್ದರೆ, ಅವರು ತಮ್ಮ ದೈನಂದಿನ ಕೆಲಸಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂದು ಕೋರ್ಟ್‌ ಪ್ರಶ್ನಿಸಿದೆ.

   ಯಾವುದೇ ರಾಜ್ಯದ ಸರ್ಕಾರಿ ನೌಕರರು ರಾಜ್ಯ ಭಾಷೆಯಲ್ಲಿ ಪ್ರವೀಣರಾಗಿರಬೇಕು, ಇಲ್ಲದಿದ್ದರೆ ಅವರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು. ಪ್ರಕರಣವನ್ನು ಆರು ತಿಂಗಳ ಕಾಲ ಮುಂದೂಡಲಾಗುತ್ತಿದೆ ಎಂದು ಅದು ಹೇಳಿದೆ. ರಾಜ್ಯದಲ್ಲಿ ಭಾಷಾ ಯುದ್ಧ ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ನ್ಯಾಯಾಲಯದ ಹೇಳಿಕೆಗಳು ಮಹತ್ವದ್ದಾಗಿವೆ.

Recent Articles

spot_img

Related Stories

Share via
Copy link