ರೈಲ್ವೆ ಯೋಜನೆಗಳ ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಿ: ಕೇಂದ್ರಕ್ಕೆ ದೇವೇಗೌಡ ಒತ್ತಾಯ

ನವದೆಹಲಿ:

   ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಬುಧವಾರ ಒತ್ತಾಯಿಸಿದ್ದಾರೆ.

   ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

   ಹಿಂದಿನ ಸರ್ಕಾರಗಳು ಕರ್ನಾಟಕದ ಹಲವಾರು ನಿರ್ಣಾಯಕ ರೈಲ್ವೆ ಯೋಜನೆಗಳನ್ನು ನಿರ್ಲಕ್ಷಿಸಿವೆ. ಆದಾಗ್ಯೂ, ಪ್ರಸ್ತುತ ಸರ್ಕಾರದ ಅಡಿಯಲ್ಲಿ ರಾಜ್ಯಕ್ಕೆ ರೈಲ್ವೆ ಅನುದಾನ ಹಂಚಿಕೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಹಂಚಿಕೆಯು ರೂ.800 ಕೋಟಿಯಿಂದ ರೂ.7,000 ಕೋಟಿಗೂ ಮೀರಿ ಹೆಚ್ಚಾಗಿದೆ ಎಂದು ಹೇಳಿದರು.

   ಮೋದಿ ಅವರ ಆಡಳಿತದ ಅಡಿಯಲ್ಲಿ ರಾಜ್ಯದ ಅನೇಕ ರೈಲ್ವೆ ಯೋಜೆಗಳಿಗೆ ಮರು ಚಾಲನೆ ಸಿಕ್ಕಿದೆ. ಆದಾಗ್ಯೂ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಮತ್ತು ಶೃಂಗೇರಿಗೆ ರೈಲ್ವೆ ಮಾರ್ಗ ಮತ್ತು ಬೆಂಗಳೂರಿನಿಂದ ಭಾರತದ ಇತರೆ ಭಾಗಗಳಿಗೆ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಇನ್ನೂ ಬಾಕಿ ಉಳಿದಿವೆ. ಇವುಗಳ ಕಡೆ ರೈಲ್ವೆ ಸಚಿವರು ತಕ್ಷಣ ಗಮನ ಹರಿಸಬೇಕಾಗಿದೆ ಎಂದು ಮನವಿ ಮಾಡಿದರು.

    ಚರ್ಚೆ ವೇಳೆ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸುವಂತೆ ಸರ್ಕಾರವನ್ನು ಪದೇ ಪದೆ ಮನವಿ ಮಾಡಿದರು. ರೈಲ್ವೆ ಸಂಪರ್ಕವು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ಪ್ರಯಾಣಕ್ಕೆ ಕಾರಣವಾದ ಕೆಲ ಮಹತ್ವದ ಅಂಶಗಳನ್ನು ಉದಾಹರಣೆ ಸಮೇತವಾಗಿ ಉಲ್ಲೇಖಿಸಿದರು. ಹಾಸನದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿದರೆ ಟಿಕೆಟ್ ವೆಚ್ಚ ರೂ.30 ಆಗುತ್ತದೆ. ಆದರೆ, ಬಸ್ ದರಗಳು ಬಹುತೇಕ ಎರಡು ಪಟ್ಟು ಮೂರು ಪಟ್ಟು ಹೆಚ್ಚಾಗಿರುತ್ತವೆ. ಇದಕ್ಕಾಗಿಯೇ ರೈಲ್ವೆ ಯೋಜನೆಗಳ ವಿಸ್ತರಣೆ ಪೂರ್ಣ ವೇಗದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.

    ಇದೇ ವೇಳೆ ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ದೇವೇಗೌಡ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

    ತಮ್ಮ ಅನುಭವದಿಂದ ಹೇಳುತ್ತಿದ್ದೇನೆ, ಕಳೆದ 75 ವರ್ಷಗಳ ಅಭಿವೃದ್ಧಿಯನ್ನು ಪರಿಶೀಲನೆ ಮಾಡಿ ನೋಡಿದಾಗ 10 ವರ್ಷಗಳ ಅಭಿವೃದ್ಧಿ ಕಣ್ಣಿಗೆ ಕಟ್ಟುವಂತೆ ಕಾಣುತ್ತದೆ. ಈ ಹಿಂದೆ ಅನುಮೋದನೆ ಪಡೆಯಲು ವರ್ಷಗಳೇ ಹಿಡಿಯುತ್ತಿದ್ದ ರೈಲ್ವೆ ಯೋಜನೆಗಳು ಈಗ ಅಭೂತಪೂರ್ವ ವೇಗದಲ್ಲಿ ಕಾರ್ಯಗತಗೊಳ್ಳುತ್ತಿವೆ ಎಂದರು,

    ಬಳಿಕ ತಮ್ಮ ಅಧಿಕಾರಾವಧಿಯಲ್ಲಿ ರೈಲ್ವೆ ಅನುದಾನ ಹಂಚಿಕೆ, ಯೋಜನೆಗಳ ಜಾರಿ ಇತ್ಯಾದಿ ಅಂಶಗಳನ್ನು ನೆನಪು ಮಾಡಿಕೊಂಡರು, ಅಲ್ಲದೆ, ಆಗ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮತ್ತು ನಿಧಾನಗತಿಯ ಯೋಜನಾ ಅನುಷ್ಠಾನ ಪರಿಸ್ಥಿತಿಯನ್ನೂ ಸ್ಮರಿಸಿದರು.

    ಇದಕ್ಕೆ ವ್ಯತಿರಿಕ್ತವಾಗಿ, ದೇಶಾದ್ಯಂತ ರೈಲ್ವೆ ಅಭಿವೃದ್ಧಿಯನ್ನು ಪರಿವರ್ತಿಸಿರುವ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಸ್ಪಷ್ಟ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು.

    ರೈಲ್ವೆ ವಿಸ್ತರಣೆ ಮತ್ತು ಸುರಕ್ಷತೆಯಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಈ ಹಿಂದೆ, ಆಧುನಿಕ ಮೂಲಸೌಕರ್ಯಗಳ ಕೊರತೆಯಿಂದಾಗಿ ರೈಲ್ವೆ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದ್ದವು. ಆದರೆ, ಇಂದು ಸುರಕ್ಷತಾ ಮಾನದಂಡಗಳು ಗಮನಾರ್ಹವಾಗಿ ಸುಧಾರಿಸಿವೆ. ಇದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಯತ್ನಗಳು ಕಾರಣ. ಅಶ್ವಿನಿ ವೈಷ್ಣವ್ ಅವರು, ರಾಷ್ಟ್ರದ ಪ್ರಗತಿಗೆ ಬದ್ಧರಾಗಿರುವ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ನಾಯಕ ಎಂದು ಬಣ್ಣಿಸಿದರು.

Recent Articles

spot_img

Related Stories

Share via
Copy link