ನವದೆಹಲಿ:
ಮಂಗಳವಾರ ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರು ರೈಲನ್ನು ಅಪಹರಿಸಿದ್ದರು. ಅದಕ್ಕೆ ಪಾಕಿಸ್ತಾನ ಭಾರತವನ್ನು ದೂಷಿಸಿತ್ತು. ಧಾನಿ ಶಹಬಾಜ್ ಷರೀಫ್ ಅವರ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲಾ, ಬಲೂಚ್ ಲಿಬರೇಶನ್ ಆರ್ಮಿ (BLA) ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಗಳಿಗೆ ಭಾರತ ಸಹಾಯ ಮಾಡುತ್ತಿದೆ ಎಂದು ದೂಷಿಸಿದರು. ಭಾರತ ಇದನ್ನೆಲ್ಲಾ ಮಾಡುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಹೇಳಿದ್ದರು. ಇದೀಗ ಪಾಕ್‌ನ ಈ ಹೇಳಿಕೆಗೆ ಭಾರತ ತಕ್ಕ ತಿರುಗೇಟು ನೀಡಿದೆ. ಪಾಕಿಸ್ತಾನವು ಇತರರನ್ನು ದೂಷಿಸುವ ಬದಲು ತನ್ನನ್ನು ತಾನು ನೋಡಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿದೆ.
ಪಾಕ್‌ನ ಆರೋಪಕ್ಕೆ ತಿರುಗೇಟು ನೀಡಿರುವ ಭಾರತ ಪಾಕಿಸ್ತಾನ ಮಾಡಿರುವ ಆಧಾರರಹಿತ ಆರೋಪಗಳನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ಬೇರೆಯವರತ್ತ ಬೆರಳು ತೋರಿಸಿ ತನ್ನ ಆಂತರಿಕ ಸಮಸ್ಯೆಗಳು ಮತ್ತು ವೈಫಲ್ಯಗಳಿಗೆ ಇತರರ ಮೇಲೆ ಹೊಣೆಗಾರಿಕೆಯನ್ನು ಹೊರಿಸುವ ಬದಲು ತಮ್ಮ ದೇಶವನ್ನು ತಾವು ನೋಡಿಕೊಳ್ಳಬೇಕು ಎಂದು ಹೇಳಿದೆ.
ಜಾಫರ್ ಎಕ್ಸ್‌ಪ್ರೆಸ್ ಮೇಲೆ ದಾಳಿ ಮಾಡಿದ ಉಗ್ರರು ಅಫ್ಘಾನಿಸ್ತಾನ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹರಡುವಲ್ಲಿ ಭಾರತದ ಪಾತ್ರವೂ ಇದೆ ಎಂದು ಅವರು ಆರೋಪಿಸಿದ್ದರು. ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಬಂಡುಕೋರರು ಹೈಜಾಕ್ ಮಾಡಿದ್ದ ಪ್ರಯಾಣಿಕ ರೈಲಿನ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದ್ದು, ಹೈಜಾಕ್ ಮಾಡಿದ್ದ 30ಕ್ಕೂ ಹೆಚ್ಚು ಉಗ್ರರ ಹೆಡೆಮುರಿ ಕಟ್ಟಲಾಗಿದೆ ಎಂದು ಪಾಕಿಸ್ತಾನ ಸೇನೆ ಮಾಹಿತಿ ನೀಡಿದೆ. ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಕ್ವಾದ ಪೇಶಾವರ್‌ಗೆ ತೆರಳುತ್ತಿದ್ದ ಪಾಕಿಸ್ತಾನ ರೈಲ್ವೇ ಇಲಾಖೆಗೆ ಸೇರಿದ ಜಾಫರ್ ಎಕ್ಸ್‌ಪ್ರೆಸ್ ಅನ್ನು ಬಲೂಚಿಸ್ತಾನ ಬಂಡುಕೋರರು ಅಪಹರಿಸಿದ್ದರು. ಈ ರೈಲಿನ ಸುಮಾರು 9 ಬೋಗಿಗಳಲ್ಲಿದ್ದ 450ಕ್ಕೂ ಅಧಿಕ ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ರೈಲ್ವೇ ಹಳಿಗಳನ್ನು ಸ್ಫೋಟಿಸಿ ಬಿಎಲ್ಎ ಬಂಡುಕೋರರು ರೈಲನ್ನು ವಶಕ್ಕೆ ಪಡೆದಿದ್ದರು.
ಬಂಡುಕೋರ ಗುಂಪಿನಿಂದ ಒತ್ತೆಯಾಳಾಗಿರಿಸಲ್ಪಟ್ಟಿದ್ದ 340 ಕ್ಕೂ ಹೆಚ್ಚು ರೈಲು ಪ್ರಯಾಣಿಕರನ್ನು 30 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದೆ. ಅಂತೆಯೇ ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ 27 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
