ಬೆಂಗಳೂರು:
ಮುಂದಿನ ವರ್ಷವೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಅದರ ಮುಂದಿನ ಸರಕಾರದ ಆಡಳಿತ ಅವಧಿಗೂ ನಾನೇ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದಾರೆ. ವಿಧಾನ ಸಭೆಯಲ್ಲಿ ವಿಪಕ್ಷ ನಾಯಕರ ಮಾತಿನ ಸಂದರ್ಭದಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಸಿಎಂ ಪದವಿಯಲ್ಲಿ ಬದಲಾವಣೆಯ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆಯಲು ಈ ಸಂದರ್ಭವನ್ನು ಅವರು ಉಪಯೋಗಿಸಿಕೊಡರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಸದಸ್ಯರ ನೇಮಕಕ್ಕೆ ಆಕ್ಷೇಪಿಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುತ್ತಿದ್ದರು. ಆಗ ಸಿದ್ದರಾಮಯ್ಯ ಅವರು “ಹೇ… ಆಶೋಕ ಬರೆದುಕೊ, ನಾನೇ ಪರ್ಮನೆಂಟು” ಅಂತ ಹೇಳಿದ್ದರು. “ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಅನೇಕ ಕಾಂಗ್ರೆಸ್ ನಾಯಕರೇ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಐದು ವರ್ಷ ಪೂರೈಸಲಿ ಎಂದು ನಾವು ಬಯಸುತ್ತೇವೆ” ಎಂದು ಆರ್. ಅಶೋಕ್ ಹೇಳಿದರು.
ಇದಕ್ಕೆ ಮರು ಉತ್ತರಿಸಿದ ಸಿದ್ದರಾಮಯ್ಯ ಅವರು, “ಹೌದು, ಈ ಐದು ವರ್ಷ ಅಲ್ಲ, ಮತ್ತೆ ಮುಂದಿನ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ” ಎಂದು ಹೇಳಿದರು. ಆಗಲೂ ನೀವೇ ಮುಖ್ಯಮಂತ್ರಿ ಆಗಿರುತ್ತೀರಾ ಎಂಬ ಬಿಜೆಪಿ ಸದಸ್ಯರ ಪ್ರಶ್ನೆಗೆ, “ಹೌದು ನಾನೇ ಇರುತ್ತೇನೆ” ಎಂದು ಸಿದ್ದರಾಮಯ್ಯ ಉತ್ತರಿಸಿದರು.
ಸಿದ್ದರಾಮಯ್ಯ ಅವರ ಈ ಮಾತುಗಳು ಬಿಜೆಪಿ ಶಾಸಕರ ಬಾಯಿ ಮುಚ್ಚಿಸಿತು. ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಪದವಿ ಆಕಾಂಕ್ಷಿಗಳ ಬಣದಲ್ಲಿಯೂ ಈ ಮಾತು ಕಳವಳ ಮೂಡಿಸಿರುವ ಸಾಧ್ಯತೆ ಇದೆ.