ಬೆಂಗಳೂರು:
ಕಳೆದ ಹಲವು ತಿಂಗಳುಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ವಾಪಸಾಗಲು ಮತ್ತಷ್ಟು ದಿನಗಳು ಕಾಯಬೇಕಿದೆ. ಎಲೋನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್ ಕಾರ್ಯಾಚರಣೆ ಬುಧವಾರ ವಿಫಲವಾದ ನಂತರ, ಈ ಯೋಜನೆ ಮತ್ತಷ್ಟು ಮುಂದೂಡಿಕೆಯಾಗಿದ್ದು, ಈಗಾಗಲೇ ಸಿಲುಕಿರುವ ಗಗನಯಾತ್ರಿಗಳ ಸುರಕ್ಷತೆಯ ಕುರಿತು ಆತಂಕ ಸೃಷ್ಟಿಸಿದೆ.ರಾಕೆಟ್‌ನ ಲಾಂಚ್‌ಪ್ಯಾಡ್‌ನಲ್ಲಿನ ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಪೇಸ್‌ಎಕ್ಸ್ ಬುಧವಾರ ಕ್ರೂ-10 ಉಡಾವಣೆಯನ್ನು ವಿಳಂಬಗೊಳಿಸಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ನಾಲ್ಕು ಬದಲಿ ಗಗನಯಾತ್ರಿಗಳನ್ನು ಕಳುಹಿಸಿ ದೀರ್ಘಾವಧಿಯಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಸ್ ಕರೆತುವ ಯೋಜನೆಯನ್ನು ಹೊಂದಿತ್ತು. ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಬೋಯಿಂಗ್‌ನ ಸ್ಟಾರ್‌ಲೈನರ್‌ನಲ್ಲಿ ಪ್ರಯಾಣಿಸಿದ ನಂತರ ಇಬ್ಬರೂ ಸುಮಾರು ಒಂಬತ್ತು ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ.
ಉಡಾವಣಾ ಕ್ಷಣಗಣನೆಯ ಸಮಯದಲ್ಲಿ ಲಾಂಚ್ ಪ್ಯಾಡ್ ಸಮಸ್ಯೆಯಿಂದಾಗಿ ಅಧಿಕಾರಿಗಳು ಯೋಜನೆಯ ರದ್ದತಿಯನ್ನು ಘೋಷಿಸಿದರಾಧರೂ, ಹೊಸ ಉಡಾವಣಾ ದಿನಾಂಕವನ್ನು ತಕ್ಷಣವೇ ದೃಢಪಡಿಸದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ವಿಲ್ಮೋರ್ ಮತ್ತು ವಿಲಿಯಮ್ಸ್‌ಗೆ ಮೂಲತಃ ನಿಗದಿಪಡಿಸಿದ ಕಾಲಾವಧಿಗಿಂತ ಮುಂಚಿತವಾಗಿ ಹಿಂದಿರುಗುವಂತೆ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಒತ್ತಾಯಿಸಿದ ನಂತರ, ಯುಎಸ್ ಬಾಹ್ಯಾಕಾಶ ಸಂಸ್ಥೆ ಎರಡು ವಾರಗಳ ಕೆಲಸವನ್ನು ವೇಗಗೊಳಿಸಿತ್ತು.
ಈ ಇಬ್ಬರು ಗಗನಯಾತ್ರಿಗಳು ಆರಂಭದಲ್ಲಿ ಕೇವಲ ಎಂಟು ದಿನಗಳ ಕಾಲ ISSನಲ್ಲಿ ಇರಬೇಕಿತ್ತು, ಆದರೆ ಅವರ ಕಾರ್ಯಾಚರಣೆಯು ಗಮನಾರ್ಹವಾಗಿ ದೀರ್ಘಕಾಲಕ್ಕೆ ಎಳೆಯಲ್ಪಟ್ಟಿದೆ. ಅವರನ್ನು ಬಾಹ್ಯಾಕಾಶಕ್ಕೆ ಸಾಗಿಸಿದ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಕಳೆದ ವರ್ಷ ಅವರಿಲ್ಲದೆ ಭೂಮಿಗೆ ಮರಳಿತ್ತು. ಇದರ ಬಳಿಕ ಸಮಸ್ಯೆಗಳು ಆರಂಭವಾಗಿದ್ದವು.
ಕೇಪ್ ಕೆನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 7.48 ET (23:48 GMT) ಕ್ಕೆ ಸ್ಪೇಸ್‌ಎಕ್ಸ್ ರಾಕೆಟ್ ಉಡಾವಣೆಯಾಗಬೇಕಿತ್ತು, ಇದರಲ್ಲಿ ಇಬ್ಬರು ಅಮೇರಿಕನ್ ಗಗನಯಾತ್ರಿಗಳು ಮತ್ತು ಜಪಾನ್ ಮತ್ತು ರಷ್ಯಾದಿಂದ ತಲಾ ಒಬ್ಬ ಗಗನಯಾತ್ರಿಯನ್ನು ಒಳಗೊಂಡ ನಾಲ್ಕು ಸಿಬ್ಬಂದಿ ಇದ್ದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಂಶೋಧನೆ ಮತ್ತು ನಿರ್ವಹಣೆಗೆ ಸಹಾಯ ಮಾಡುವಾಗ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿದ್ದಾರೆ ಎಂದು ನಾಸಾ ದೃಢಪಡಿಸಿತ್ತು. ಮಾರ್ಚ್ 4ರಂದು ಕರೆ ಮಾಡಿದ ವಿಲಿಯಮ್ಸ್, ತನ್ನ ವಿಸ್ತೃತ ಕಾರ್ಯಾಚರಣೆಯ ನಂತರ ತನ್ನ ಕುಟುಂಬ ಮತ್ತು ಸಾಕು ನಾಯಿಗಳೊಂದಿಗೆ ಮತ್ತೆ ಒಂದಾಗಲು ಉತ್ಸುಕರಾಗಿದ್ದೇನೆ ಎಂದಿದ್ದರು. “ಇದು ನಮಗಿಂತ ಅವರಿಗೆ ರೋಲರ್ ಕೋಸ್ಟರ್ ರೈಡ್ ಆಗಿ ಆಗಿದೆ,” ಅವರು ಹೇಳಿದ್ದರು. ದೀರ್ಘ ವಿಳಂಬದ ಹೊರತಾಗಿಯೂ, ISSನಲ್ಲಿ ಅವರ ಕೆಲಸವು ಆಕರ್ಷಕವಾಗಿ ಮತ್ತು ತೃಪ್ತಿಕರವಾಗಿಯೇ ಇದೆ ಎಂದು ಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ಈಗ ಸ್ಟಾರ್‌ಲೈನರ್‌ನ ಅಭಿವೃದ್ಧಿಯು 2019ರಿಂದ ನಿರಂತರ ತಾಂತ್ರಿಕ ಸಮಸ್ಯೆಗಳು ಮತ್ತು ಬಜೆಟ್ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ ಯೋಜನೆಯು ಗಮನಾರ್ಹವಾಗಿ ವಿಳಂಬಗೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕನಿಷ್ಠ $4 ಬಿಲಿಯನ್ ಮೌಲ್ಯದಲ್ಲಿ ಅಭಿವೃದ್ಧಿಪಡಿಸಲಾದ SpaceX ನ ಕ್ರೂ ಡ್ರ್ಯಾಗನ್, ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಸ್ತುತ ISS ಸಿಬ್ಬಂದಿ ತಿರುಗುವಿಕೆಗೆ ಬಳಸಲಾಗುವ ಏಕೈಕ US ಬಾಹ್ಯಾಕಾಶ ನೌಕೆಯಾಗಿ ಉಳಿದಿದೆ. ಏನೇ ಆಗಲಿ, 9 ತಿಂಗಳುಗಳಿಂದ ಭೂಮಿಗೆ ಹಿಂತಿರುಗಲು ಕಾಯುತ್ತಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಶೀಘ್ರವೇ ಸುರಕ್ಷಿತವಾಗಿ ಅಗಮಿಸಲಿ ಎಂಬುದು ನಮ್ಮ ಆಶಯ.
