ಅಯೋಧ್ಯೆ:
ದೇಶದ ಧಾರ್ಮಿಕ ಪ್ರವಾಸೋದ್ಯಮ ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸರ್ಕಾರಕ್ಕೆ ಸುಮಾರು 400 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದು, ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ ಸುಮಾರು 400 ಕೋಟಿ ರೂಪಾಯಿ ತೆರಿಗೆ ಪಾವತಿಸಿದೆ. ಈ ಮೊತ್ತವನ್ನು ಫೆಬ್ರವರಿ 5, 2020 ರಿಂದ ಫೆಬ್ರವರಿ 5, 2025 ರ ನಡುವೆ ಪಾವತಿಸಲಾಗಿದೆ ಎಂದು ಅವರು ಹೇಳಿದರು.
ಇದರಲ್ಲಿ 270 ಕೋಟಿ ರೂಪಾಯಿಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಗಿ ಪಾವತಿಸಲಾಗಿದ್ದು, ಉಳಿದ 130 ಕೋಟಿ ರೂಪಾಯಿಗಳನ್ನು ವಿವಿಧ ತೆರಿಗೆ ವರ್ಗಗಳ ಅಡಿಯಲ್ಲಿ ಪಾವತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಟ್ರಸ್ಟ್‌ನ ಹಣಕಾಸು ದಾಖಲೆಗಳನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅಧಿಕಾರಿಗಳು ನಿಯಮಿತವಾಗಿ ಲೆಕ್ಕಪರಿಶೋಧಿಸುತ್ತಾರೆ ಎಂದು ಚಂಪತ್ ರೈ ಹೇಳಿದರು.
ಇದೇ ವೇಳೆ ಅಯೋಧ್ಯೆಯು ಭಕ್ತರು ಮತ್ತು ಪ್ರವಾಸಿಗರಲ್ಲಿ ಹತ್ತು ಪಟ್ಟು ಹೆಚ್ಚಳ ಕಂಡಿದ್ದು, ಇದು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಚಂಪತ್ ರೈ ಅವರು ಹೇಳಿದರು. ಅಂತೆಯೇ ಮಹಾಕುಂಭದ ಸಮಯದಲ್ಲಿ 1.26 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.
ಕಳೆದ ವರ್ಷ, ಅಯೋಧ್ಯೆಗೆ 16 ಕೋಟಿ ಭಕ್ತರು ಆಗಮಿಸಿದ್ದು, 5 ಕೋಟಿ ಜನರು ರಾಮ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ ಎಂದು ಟ್ರಸ್ಟ್ ನ ಮೂಲಗಳು ತಿಳಿಸಿವೆ.
