ಉಡುಪಿ:
ಸಾಲದ ಕಂತು ಮರುಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಇಲ್ಲಿನ ಸಂತೆಕಟ್ಟೆಯ ಸೊಸೈಟಿಯೊಂದರ ಸಿಬಂದಿ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.ಕಲ್ಯಾಣಪುರ ನಿವಾಸಿ ನಿಖಿತಾ ಅವರು ಮೇರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದುಕೊಂಡಿದ್ದು, ಸ್ವಲ್ಪ ಸ್ವಲ್ಪವಾಗಿ ಮರುಪಾವತಿ ಮಾಡುತ್ತಿದ್ದರು. ಆದರೂ ಸೊಸೈಟಿಯ ಸಿಬಂದಿ ಪದೇ ಪದೇ ಇವರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು.
ಮಾ.13ರಂದು ಸಂಜೆ 5 ಗಂಟೆಗೆ ಇಬ್ಬರು ಸಿಬಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಏಕವಚನದಲ್ಲಿ ನಿಂದಿಸಿ 10,000 ರೂ. ಕಟ್ಟುವಂತೆ ಪೀಡಿಸಿದ್ದರು. ಅಲ್ಲದೇ ಸಾಲ ವಸೂಲಿ ಹೇಗೆ ಮಾಡಬೇಕೆನ್ನುವುದು ಗೊತ್ತಿದೆ ಎಂದೂ ಬೆದರಿಕೆ ಹಾಕಿದ್ದರು. ಹಣ ಕಟ್ಟುವುದಕ್ಕೆ ಹೋಗಿದ್ದ ನಿಖಿತಾ ಅವರಿಗೆ ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಲಾಗಿದೆ ಎಂದು ನಿಖಿತಾ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
