ಗ್ಯಾರೆಂಟಿ ಯೋಜನೆ ಅನುಷ್ಠಾನ : ಎಚ್ಚರಿಕೆ ಹೆಜ್ಜೆ ಇಡಲು ಮುಂದಾದ ಮಹಾ ಸರ್ಕಾರ

ಮುಂಬೈ:

    ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಈಗ ಎಚ್ಚರಿಕೆ ಹೆಜ್ಜೆ ಇಡಲು ಆರಂಭಿಸಿದೆ.    ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಾ ಮಹಿಳೆಯರಿಗೆ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಮಾಸಾಶನವನ್ನು 1500 ರೂ. ನೀಡಲಾಗುತ್ತಿತ್ತು. ಇದೀಗ ಈ ಯೋಜನೆಯನ್ನು ಬಡ ಮಹಿಳೆಯರಿಗಷ್ಟೇ ಸೀಮಿತಗೊಳಿಸಲು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

   ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ ಯೋಜನೆಗೆ ಪ್ರಸಕ್ತ ವರ್ಷದ ಅನುದಾನವನ್ನೂ ಕಡಿತಗೊಳಿಸಿತ್ತು. ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದಂತೆ ಮಾಸಿಕ ನೆರವಿನ ಪ್ರಮಾಣವನ್ನು 1500 ರೂ.ನಿಂದ 2100 ರೂ.ಗೆ ಹೆಚ್ಚಿಸುವ ಕುರಿತು ಪ್ರಸ್ತಾಪ ಮಾಡಿರಲಿಲ್ಲ.

   ಈ ಕುರಿತು ವಿಧಾನಸಭೆಯಲ್ಲಿ ರಾಜ್ಯ ವಿತ್ತ ಸಚಿವ, ಡಿಸಿಎಂ ಅಜಿತ್ ಪವಾರ್ ಮಾತನಾಡಿ, ಕೆಲವು ಶ್ರೀಮಂತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗಡಿಬಿಡಿ ಹಾಗೂ ಗೊಂದಲದಿಂದ ಹೀಗಾಗಿದೆ. ಲಡ್ಡಿ ಬಹಿನ್ ಯೋಜನೆಯು ಬಡ ಮಹಿಳೆಯರಿಗಷ್ಟೇ ಸೀಮಿತವಾಗಿದ್ದು, ಇದಕ್ಕೆ ಬೇಕಾದ ಬದಲಾವಣೆಯನ್ನು ಮಾಡುತ್ತೇವೆ ಎಂದರು.

   ಲಡ್ಕಿ ಬಹಿನ್ ಯೋಜನೆಯನ್ನು ನಿಲ್ಲಿಸುವುದಿಲ್ಲ. ಅಲ್ಲದೇ ಈಗಾಗಲೇ ಈ ಯೋಜನೆಯ ಫಲಾನುಭವಿಗಳಾಗಿದ್ದ ಶ್ರೀಮಂತರು ಹಣವನ್ನು ಹಿಂದಿರುಗಿಸಬೇಕಾಗಿಲ್ಲ. ಇನ್ನು ಮುಂದೆ ಬಡ ಮಹಿಳೆಯರು ಮಾತ್ರ ಈ ಯೋಜನೆ ಫಲಾನುಭವಿಗಳಾಗಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.

   ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯಿಂದ 10 ಸಾವಿರ ಕೋಟಿ ರೂ. ಲಡ್ಕಿ ಬಹಿನ್ ಯೋಜನೆಗೆ ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಅವರು ಪ್ರತಿಕ್ರಿಯಿಸಿದರು. ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಶೇ.40ರಷ್ಟು ನಿಧಿಯನ್ನು ಯೋಜನೆಗೆ ಬಳಸುತ್ತಿದೆ. ಲಡ್ಕಿ ಬಹಿನ್‌ಗೆ ಬಳಸಲಾದ ಹಣವನ್ನು ಹೊರತು ಪಡಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿಯಲ್ಲಿ ಶೇ.18 ಹಾಗೂ 19ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link