ಮಾಲೀಕರ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆ; ʼಭಯೋತ್ಪಾದನೆʼ ಎಂದ ಎಲಾನ್‌ ಮಸ್ಕ್

ವಾಷಿಂಗ್ಟನ್‌:

   ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಎಲಾನ್ ಮಸ್ಕ್   ಅವರ ವಿವಾದಾತ್ಮಕ ಪಾತ್ರದ ಬಗ್ಗೆ ಪ್ರತಿಭಟನೆಗಳು ತಾರಕಕ್ಕೇರಿವೆ. ಅಮೆರಿಕದ ಟೆಸ್ಲಾ ಸರ್ವಿಸ್‌ ಸೆಂಟರ್‌ವೊಂದರಲ್ಲಿ   ಹಲವಾರು ಟೆಸ್ಲಾ ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಕಾರು ಮಾಲೀಕರ ವೈಯಕ್ತಿಕ ವಿವರಗಳನ್ನು ಡಾಕ್ಸಿಂಗ್ ವೆಬ್‌ಸೈಟ್‌ನಲ್ಲಿ ಸೋರಿಕೆ ಮಾಡಲಾಗಿದೆ. ಲಾಸ್ ವೇಗಾಸ್‌ನಲ್ಲಿ ಮೊಲೊಟೊವ್ ಕಾಕ್‌ಟೇಲ್‌ಗಳನ್ನು ಬಳಸಿ ವ್ಯಕ್ತಿಯೊಬ್ಬರು ಐದು ಕಾರುಗಳನ್ನು ಸುಟ್ಟುಹಾಕಿದ ನಂತರ ಮಂಗಳವಾರವೂ ಟೆಸ್ಲಾ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವ ದಾಳಿಗಳು ಮುಂದುವರೆದಿವೆ. ಈ ಘಟನೆಯನ್ನು ಸಂಭಾವ್ಯ ಭಯೋತ್ಪಾದನಾ ಕೃತ್ಯವೆಂದು ಎಫ್‌ಬಿಐ ಹೇಳಿದ್ದು, ತನಿಖೆ ನಡೆಸುತ್ತಿದೆ.

    ಸರ್ವಿಸ್‌ ಸೆಂಟರ್‌ನ ಮುಂಭಾಗದ ಬಾಗಿಲಿನ ಮೇಲೆ “ರೆಸಿಸ್ಟ್”   ಎಂಬ ಪದವನ್ನು ಸ್ಪ್ರೇ-ಪೇಂಟ್ ಮಾಡಲಾಗಿದೆ. ಘಟನೆಯಿಂದಾಗಿ ಯಾರಿಗೂ ಗಾಯಗಳಾದ ಅಥವಾ ಗಂಭೀರ ಪ್ರಾಣಾಪಾಯವುಂಟಾದ ಕುರಿತು ಯಾವುದೇ ರೀತಿಯ ವರದಿಗಳಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬ್ಯಾಟರಿ ಘಟಕಗಳಿಗೆ ಬೆಂಕಿ ತಲುಪುವ ಮುನ್ನವೇ ಅದನ್ನು ನಂದಿಸಿದ್ದರಿಂದ ದೊಡ್ಡ ಮಟ್ಟದ ಸ್ಫೋಟವನ್ನು ತಡೆದಿದ್ದಾರೆ. “ಇದು ಟೆಸ್ಲಾ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಲಾದ ದಾಳಿಯಾಗಿದೆ” ಎಂದು ಲಾಸ್ ವೇಗಾಸ್ ಪೊಲೀಸರು ತಿಳಿಸಿದ್ದಾರೆ.

     ಕಾನ್ಸಾಸ್ ನಗರದಲ್ಲಿ, ಎರಡು ಟೆಸ್ಲಾ ಸೈಬರ್‌ಟ್ರಕ್‌ಗಳಿಗೂ ಬೆಂಕಿ ಹಚ್ಚಲಾಗಿದೆ. ದಕ್ಷಿಣ ಕೆರೊಲಿನಾದಲ್ಲಿ, ವ್ಯಕ್ತಿಯೊಬ್ಬರು ಟೆಸ್ಲಾ ಚಾರ್ಜಿಂಗ್ ಸ್ಟೇಷನ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಲು ಹೋಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆಯೂ ನಡೆದಿದೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ವಾಹನಗಳಿಗೆ ಬೆಂಕಿ ಹಚ್ಚಿದ ವೀಡಿಯೊಗಳನ್ನು ಮರುಪೋಸ್ಟ್ ಮಾಡಿದ ಟೆಸ್ಲಾ ಸಿಇಒ ಎಲಾನ್‌ ಮಸ್ಕ್, ಈ ಘಟನೆಯನ್ನು “ಭಯೋತ್ಪಾದನೆ” ಎಂದು ಕರೆದಿದ್ದಾರೆ. “ಈ ಮಟ್ಟದ ಹಿಂಸಾಚಾರವು ಹುಚ್ಚುತನ ಮತ್ತು ಗಂಭೀರವಾದ ತಪ್ಪು. ಟೆಸ್ಲಾ ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ ಮತ್ತು ಈ ದುಷ್ಟ ದಾಳಿಗೆ ಅರ್ಹವಾಗುವಂತದ್ದು ಏನನ್ನೂ ಮಾಡಿಲ್ಲ” ಎಂದು ಟ್ರಂಪ್ ಅವರ DOGE ತಂಡದ ಭಾಗವಾಗಿರುವ ಮಸ್ಕ್ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಟೆಸ್ಲಾ ವಾಹನಗಳು ಮತ್ತು ಡೀಲರ್‌ಶಿಪ್‌ಗಳ ವಿರುದ್ಧ ಹೆಚ್ಚುತ್ತಿರುವ ವಿಧ್ವಂಸಕ ಕೃತ್ಯಗಳ ವರದಿಗಳಿಗೆ ಈ ಘಟನೆಗಳು ಸಹ ಸೇರ್ಪಡೆಯಾಗಿವೆ. ಸರ್ಕಾರದ ದಕ್ಷತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಫೆಡರಲ್ ಇಲಾಖೆಗಳಲ್ಲಿ ಉದ್ಯೋಗ ಕಡಿತಕ್ಕೆ ಮಸ್ಕ್ ಒತ್ತಾಯಿಸಿದ್ದ ಬಳಿಕ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಘಟನೆಗಳು ಟೆಸ್ಲಾದ ಆರ್ಥಿಕ ಸಂಕಷ್ಟವನ್ನೂ ಹೆಚ್ಚಿಸಿದ್ದು, ಕಂಪನಿಯು ತನ್ನ ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಮೊದಲ ಬಾರಿಗೆ ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಕಳೆದ ವಾರ, ಟ್ರಂಪ್ ಮಸ್ಕ್‌ಗೆ ಬೆಂಬಲ ನೀಡುವ ಪ್ರದರ್ಶನದಲ್ಲಿ ಟೆಸ್ಲಾವನ್ನು ಖರೀದಿಸಿ ದೇಶದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

ಈ ಎಲ್ಲಾ ಘಟನೆಗಳ ನಡುವೆ, ‘ಡಾಗ್‌ಕ್ವೆಸ್ಟ್’ ಎಂಬ ಡಾಕ್ಸಿಂಗ್ ವೆಬ್‌ಸೈಟ್ ಟೆಸ್ಲಾ ಮಾಲೀಕರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿದೆ ಎಂದು ಹೇಳಲಾಗಿದೆ. ಈ ವೆಬ್‌ಸೈಟ್ ಅಮೆರಿಕದಲ್ಲಿರುವ ಟೆಸ್ಲಾ ಮಾಲೀಕರ ಹೆಸರುಗಳು, ವಿಳಾಸಗಳು ಮತ್ತು ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸಿದೆ. ಮಾತ್ರವಲ್ಲದೇ, ಇನ್ನಷ್ಟು ಪ್ರತಿಭಟನೆಗಳನ್ನು ಪ್ರಚೋದಿಸುವ ಸಲುವಾಗಿ ಬೆಂಕಿ ಹಚ್ಚಲು ಬಳಸಲಾಗುವ ಮೊಲೊಟೊವ್ ಕಾಕ್ಟೈಲ್‌ನ ಚಿತ್ರವನ್ನು ಕರ್ಸರ್ ಆಗಿ ಬಳಸುತ್ತಿದೆ. ಹೆಚ್ಚಿನ ಟೆಸ್ಲಾ ಕಾರುಗಳನ್ನು ಮೊಲೊಟೊವ್ ಕಾಕ್ಟೈಲ್‌ಗಳನ್ನು ಬಳಸಿಯೇ ಸುಟ್ಟುಹಾಕಲಾಗಿದೆ. ಟೆಸ್ಲಾ ಚಾಲಕರು ತಮ್ಮ ವಾಹನಗಳನ್ನು ಮಾರಾಟ ಮಾಡಿರುವ ಬಗ್ಗೆ ಪುರಾವೆಗಳನ್ನು ನೀಡಿದರೆ ಮಾತ್ರ ಅವರ ವಿವರಗಳನ್ನು ತೆಗೆದುಹಾಕುವುದಾಗಿ ಸೈಟ್‌ನ ನಿರ್ವಾಹಕರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

Recent Articles

spot_img

Related Stories

Share via
Copy link