ಪ್ರಧಾನಿ ಮೋದಿ ಡ್ರೀಮ್‌ ಪ್ರಾಜೆಕ್ಟ್ ʼಚೀತಾʼ ಸದಸ್ಯ ಸೌದಿಯಲ್ಲಿ ಶವವಾಗಿ ಪತ್ತೆ

ರಿಯಾದ್‌:

     ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪ್ರಾಜೆಕ್ಟ್  ಚೀತಾದ ಪ್ರಮುಖ ಸದಸ್ಯ ಮತ್ತು ದಕ್ಷಿಣ ಆಫ್ರಿಕಾದ ವನ್ಯಜೀವಿ ತಜ್ಞ ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಅವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 42 ವರ್ಷದ ಮೆರ್ವೆ ಆಫ್ರಿಕಾದಿಂದ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವರದಿಗಳ ಪ್ರಕಾರ, ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಅವರ ಮೃತದೇಹ ಅವರ ಅಪಾರ್ಟ್‌ಮೆಂಟ್‌ನ ಕಾರಿಡಾರ್‌ನಲ್ಲಿ ಪತ್ತೆಯಾಗಿದೆ. ಅವರ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

     ವಿನ್ಸೆಂಟ್ ವ್ಯಾನ್ ಡೆರ್ ಮೆರ್ವೆ ಅವರ ತಲೆಯ ಭಾಗಕ್ಕೆ ಪೆಟ್ಟು ಬಿದ್ದಂತೆ ತೋರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟವಿಗಳನ್ನು ಪರಿಶೀಲನೆ ಮಾಡಲಾಗಿದೆ ಆದರೆ ಯಾವುದೇ ಸುಳಿವು ಕಂಡು ಬಂದಿಲ್ಲ, ಇದು ಅಪಘಾತದಂತೆ ಕಾಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿವೆ. ಆದರೆ ಮೆರ್ವೆ ಅವರ ಕುಟುಂಬ ಇದು ಅಪಘಾತವಲ್ಲ ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿದೆ. ಮೆಟಾಪಾಪ್ಯುಲೇಷನ್ ಇನಿಶಿಯೇಟಿವ್ ನ ಸ್ಥಾಪಕ ವ್ಯಾನ್ ಡೆರ್ ಮೆರ್ವೆ ವಿಶ್ವದಾದ್ಯಂತ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಶ್ರೇಷ್ಠ ವನ್ಯ ಜೀವಿ ತಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ, ಅವರ ಸಂಸ್ಥೆಯು ಸೌದಿ ಅರೇಬಿಯಾದಲ್ಲಿ ಚೀತಾಗಳನ್ನು ಪರಿಚಯಿಸುವ ಯೋಜನೆಯ ಕೆಲಸವನ್ನು ಮಾಡುತ್ತಿತ್ತು. ವ್ಯಾನ್ ಡೆರ್ ಮೆರ್ವೆ ಅವರು ಅದೇ ಕೆಲಸದ ನಿಮಿತ್ತ ಸೌದಿ ಅರೇಬಿಯಾದಲ್ಲಿ ವಾಸವಿದ್ದರು. 

    ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿಯವರ ಕನಸಿನ ಉಪಕ್ರಮವಾದ ಪ್ರಾಜೆಕ್ಟ್ ಚೀತಾದಲ್ಲಿ ನೇರವಾಗಿ ಭಾಗಿಯಾಗಿದ್ದ ಆಯ್ದ ಚೀತಾ ವನ್ಯಜೀವಿ ತಜ್ಞರಲ್ಲಿ ವ್ಯಾನ್ ಡೆರ್ ಮೆರ್ವೆ ಕೂಡ ಒಬ್ಬರಾಗಿದ್ದರು. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತಂದ ಚಿರತೆಗಳನ್ನು ಭಾರತದ ಹವಾಗುಣಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ಅವರ ಕೆಲಸವಾಗಿತ್ತು. ಆದರೆ ಹವಾಗುಣಕ್ಕೆ ಹೊಂದಿಕೊಳ್ಳಲಾಗದೆ ಹಲವು ಚೀತಾಗಳು ಪ್ರಾಣ ಬಿಟ್ಟಿದ್ದವು. ಚೀತಾಗಳು ಅರಣ್ಯದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವಾಗ ಚಿರತೆ ಹಾಗೂ ಹುಲಿಗಳಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸುತ್ತದೆ. ಇದು ಚೀತಾಗಳ ಸಾವಿಗೆ ಕಾರಣವಾಗುತ್ತದೆ ಎಂದು ಸರ್ಕಾರಕ್ಕೆ ವ್ಯಾನ್ ಡೆರ್ ಮೆರ್ವೆ ಎಚ್ಚರಿಸಿದ್ದರು.

Recent Articles

spot_img

Related Stories

Share via
Copy link