ವಿಧವೆ ವಿವಸ್ತ್ರ ಪ್ರಕರಣ; CM ಕಚೇರಿ ಮಧ್ಯಸ್ಥಿಕೆ ನಂತರ FIR ದಾಖಲಿಸಿದ ಪೊಲೀಸರು!

ಬೆಳಗಾವಿ:

   ಫೆಬ್ರವರಿ 20 ರಂದು ಸೌದತ್ತಿ ಬಳಿಯ ಹರ್ಲಾಪುರದಲ್ಲಿ ನಡೆದ ಭೂ ವಿವಾದದ ಹಿನ್ನೆಲೆಯಲ್ಲಿ ವಿಧವೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸರು ಸುಮಾರು ಒಂದು ತಿಂಗಳ ಕಾಲ ಕೇಸು ದಾಖಲಿಸಿದೆ ವಿಳಂಬ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

   ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪದೇ ಪದೇ ವರದಿ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಕಚೇರಿ, ಎಫ್‌ಐಆರ್ ದಾಖಲಿಸುವಂತೆ ಬೆಳಗಾವಿ ಪೊಲೀಸರಿಗೆ ಸೂಚಿಸಿದೆ.

  ಮಧ್ಯಪ್ರವೇಶಿಸಲು ಪ್ರಯತ್ನಿಸಿದ ತನ್ನ ಕುಟುಂಬದ ಕೆಲವು ಸದಸ್ಯರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ಘಟನೆಯ ನಂತರ ನಾನು ಸೌದತ್ತಿ ತಾಲ್ಲೂಕಿನ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದೆ, ಆದರೆ ಪೊಲೀಸರು ನನ್ನ ದೂರನ್ನು ದಾಖಲಿಸಲು ನಿರಾಕರಿಸಿದರು” ಎಂದು ಅವರು ಹೇಳಿದ್ದಾರೆ.

   ಆದರೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಮಹಿಳೆಯನ್ನು ವಿವಸ್ತ್ರಗೊಳಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಹರ್ಲಾಪುರದಲ್ಲಿ ಕೃಷಿ ಭೂಮಿಯ ಮೇಲಿನ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದದ ವೇಳೆ ಮಹಿಳೆ ಮತ್ತು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

   ಮಹಿಳೆ ಬೆಳೆ ಬೆಳೆಯುತ್ತಿದ್ದ ಕೃಷಿ ಭೂಮಿಗೆ ಜನರ ಗುಂಪು ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದಾಗ ಆಕೆಯ ಬಟ್ಟೆ ಬಿಚ್ಚಿ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎದುರಾಳಿ ಗುಂಪಿನ ಭಾಗವಾಗಿದ್ದ ಆಕೆಯ ಸಂಬಂಧಿಕರು ಕೂಡ ಜಮೀನು ತಮಗೆ ಸೇರಿದ್ದು ಎಂದು ವಾದಿಸಿದ್ದರು ಹೀಗಾಗಿ ಇದು ಘರ್ಷಣೆಗೆ ಕಾರಣವಾಯಿತು. ಮೂಲಗಳ ಪ್ರಕಾರ, ವಾಗ್ವಾದದ ಸಮಯದಲ್ಲಿ, ಮಹಿಳೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು ಎಂದು ಹೇಳಲಾಗಿದೆ.

   ಹರ್ಲಾಪುರದಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಭೂ ವಿವಾದಕ್ಕೆ ಸಂಬಂಧಿಸಿದಂತೆ ವಿಧವೆಯೊಬ್ಬರ ಮೇಲೆ ಜನರ ಗುಂಪೊಂದು ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದೆ. ವಿಧವೆ ಹರಿದ ಬಟ್ಟೆಯಲ್ಲಿ ಪೊಲೀಸ್ ಠಾಣೆಗೆ ಹೋದ ನಂತರವೂ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಫಲರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಬೆಳಗಾವಿ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಅಂತಿಮವಾಗಿ, ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Recent Articles

spot_img

Related Stories

Share via
Copy link