ಹೈದರಾಬಾದ್:
2022ರಲ್ಲಿ ತೆರೆಕಂಡ ಮ್ಯಾಜಿಕಲ್ ಡೈರಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಬದಲಾದ ರಾಮ್ ಚರಣ್ ಇಂದು (ಮಾ. 27) 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರ ಟೈಟಲ್ ರಿವೀಲ್ ಮಾಡಲಾಗಿದೆ. ‘ಉಪ್ಪೇನಾ’ ತೆಲುಗು ಚಿತ್ರ ನಿರ್ದೇಶಿಸುವ ಮೂಲಕ ಗಮನ ಸೆಳೆದ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಕ್ಕೆ ‘ಪೆಡ್ಡಿ’ ಎಂಬ ಟೈಟಲ್ ಫಿಕ್ಸ್ ಮಾಡಲಿದೆ. ʼಆರ್ಸಿ 16ʼ ಎನ್ನುವ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಆರಂಭವಾದ ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಟೈಟಲ್ ರಿವೀಲ್ ಮಾಡುವ ಜತೆಗೆ ಚಿತ್ರತಂಡ ರಾಮ್ ಚರಣ್ ಅವರ ಫಸ್ಟ್ ಲುಕ್ ಅನ್ನೂ ರಿಲೀಸ್ ಮಾಡಿದೆ. ಆ ಮೂಲಕ ಇದೊಂದು ಪಕ್ಕಾ ಮಾಸ್ ಚಿತ್ರ ಎನ್ನುವ ಸೂಚನೆ ನೀಡಿದೆ. ಇದರಲ್ಲಿ ರಾಮ್ ಚರಣ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡ, ಉದ್ದ ಕೂದಲು ಬಿಟ್ಟು, ಬಾಯಲ್ಲಿ ಬೀಡಿ ಇಟ್ಟುಕೊಂಡು ರಾಮ್ ಚರಣ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಆ ಮೂಲಕ ಪೋಸ್ಟರ್ ಇದೊಂದು ಆ್ಯಕ್ಷನ್ ಪಾಕ್ಡ್ ಸಿನಿಮಾ ಎನ್ನುವುದನ್ನು ಸಾಬೀತುಪಡಿಸಿದೆ. ರಾಮ್ ಚರಣ್ ʼರಂಗಸ್ಥಳಂʼ ಬಳಿಕ ಮತ್ತೊಮ್ಮೆ ಗ್ರಾಮೀಣ ಪ್ರದೇಶದ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮೊದಲ ಬಾರಿಗೆ ರಾಮ್ ಚರಣ್ ಮತ್ತು ಶಿವಣ್ಣ ತೆರೆ ಹಂಚಿಕೊಳ್ಳುತ್ತಿರುವ ಕಾರಣದಿಂದಲೇ ಈಗಾಗಲೇ ಸಿನಿಮಾ ಕುತೂಹಲ ಕೆರಳಿಸಿದೆ. ಕಥೆಗೆ ತಿರುವು ನೀಡುವ ಬಹುಮುಖ್ಯ ಪಾತ್ರದಲ್ಲಿ ಶಿವ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಇದು ಇವರ 2ನೇ ತೆಲುಗು ಚಿತ್ರ. ಇವರೊಂದಿಗೆ ಜಗಪತಿ ಬಾಬು, ದಿವ್ಯೇಂದು ಮತ್ತಿರರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮ್ಯೂಸಿಕ್ ನೀಡುತ್ತಿದ್ದಾರೆ.
ಈ ಸಿನಿಮಾದ ಕಥೆ ಉತ್ತರಾಂಧ್ರದ ಹಿನ್ನೆಲೆಯನ್ನು ಹೊಂದಿದೆ. ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ಅನೇಕ ಭಾವನಾತ್ಮಕ ದೃಶ್ಯಗಳಿವೆ ಎನ್ನಲಾಗಿದೆ. ಮೊದಲ ಹಂತದ ಚಿತ್ರೀಕರಣ 2024ರ ನವೆಂಬರ್ನಲ್ಲಿ ಮೈಸೂರಿನಲ್ಲಿ ಆರಂಭವಾಗಿದ್ದು, ಕೆಲವು ದಿನಗಳ ಹಿಂದೆ ಹೈದರಬಾದ್ನ ಶೆಡ್ಯೂಲ್ ಕೂಡ ಮುಕ್ತಾಯಗೊಂಡಿದೆ. ಇತ್ತೀಚೆಗೆ ತೆರೆಕಂಡ ʼಗೇಮ್ ಚೇಂಜರ್ʼ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದ್ದರಿಂದ ರಾಮ್ ಚರಣ್ ʼಪೆಡ್ಡಿʼ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇತ್ತ ʼಪೆಡ್ಡಿʼ ಲುಕ್ಗೆ ರಾಮ್ ಚರಣ್ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದರೆ, ಅತ್ತ ಅಲ್ಲು ಅರ್ಜುನ್ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ರಾಮ್ ಚರಣ್ ಅವರ ಈ ಲುಕ್ ʼಪುಷ್ಪ 2ʼ ಚಿತ್ರವನ್ನು ಹೋಲುತ್ತಿದೆ ಎನ್ನುವುದು ಹಲವರ ವಾದ. ಅಲ್ಲು ಅರ್ಜುನ್ ಚಿತ್ರವನ್ನು ಕಾಪಿ ಮಾಡಲಾಗಿದೆ ಎನ್ನುತ್ತಿದ್ದಾರೆ. ʼʼಪುಷ್ಪʼ ಫಸ್ಟ್ ಲುಕ್ ಪೋಸ್ಟರ್ ನೋಡಿ ಕಾಪಿ ಮಾಡಿದ್ದಾರೆʼʼ, ʼʼಈ ಪೋಸ್ಟರ್ ʼಪುಷ್ಪʼ ಥರ ಕಾಣಿಸುತ್ತಿದೆʼʼ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.








