ಹುಬ್ಬಳ್ಳಿಯ ಪುರಾತನ ಚಂದ್ರಮೌಳೇಶ್ವರ ದೇಗುಲಕ್ಕೆ ಬಾಲಿವುಡ್‌ ನಟಿ ಸಾರಾ ಅಲಿಖಾನ್ ಭೇಟಿ

ಹುಬ್ಬಳ್ಳಿ: 

   ವಿವಿಧ ಸಿನಿಮಾಗಳಲ್ಲಿ ನಟಿಸುತ್ತಿರುವ ಬಾಲಿವುಡ್ ನಟಿ ಸಾರಾ ಅಲಿಖಾನ್ ಹುಬ್ಬಳ್ಳಿಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬಾಲಿವುಡ್ ಸೆಲೆಬ್ರೆಟಿಗಳು ಐತಿಹಾಸಿಕ ದೇಗುಲಕ್ಕೆ ಭೇಟಿ ನೀಡುವುದು ಇದೇ ಮೊದಲೇನಲ್ಲ.

   ಅನೇಕ ಬಾಲಿವುಡ್ ಕಲಾವಿದರಂತೆ ನಟ ಸೈಫ್‌ ಅಲಿಖಾನ್‌ ಪುತ್ರಿ ಹಾಗೂ ನಟಿ ಸಾರಾ ಅಲಿಖಾನ್‌ ನಗರದ ಉಣಕಲ್‌ನಲ್ಲಿರುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

   ಕೇದಾರನಾಥ್‌ ಚಿತ್ರದ ನಾಯಕಿಯೂ ಆಗಿದ್ದ ಸಾರಾ ಚಂದ್ರಮೌಳೇಶ್ವರ ದೇವಸ್ಥಾನದ ಮೂರ್ತಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವ ಹಾಗೂ ಮುಖ್ಯದ್ವಾರ ಬಳಿಯ ಕಟ್ಟೆ – ಶಿಲ್ಪಕಲೆಯ ಎದುರು ನಿಂತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಧಾರ್ಮಿಕ ಪ್ರಯಾಣದ ಭಾಗವಾಗಿ ಶ್ರೀ ಚಂದ್ರಮೌಳೇಶ್ವರ ಮಂದಿರಕ್ಕೆ ಭೇಟಿ ನೀಡಿದ್ದ ಅವರು, ಹಂಪಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.

  ಸಾರಾ ಅಲಿಖಾನ್‌ ಹಾಕಿರುವ ಸ್ಟೋರಿಯ ಸ್ಕ್ರೀನ್‌ಶಾಟ್‌ನ್ನು ಶಾಸಕ ಮಹೇಶ ಟೆಂಗಿನಕಾಯಿ ಫೇಸ್‌ಬುಕ್‌ ಹಾಗೂ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಶಿವ ಭಕ್ತೆಯಾದ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಭೇಟಿ ನೀಡಿದ ವಿಷಯ ತಿಳಿದು ಸಂತೋಷವಾಗಿದೆ.

  ಇಂತಹ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ಸೆಲೆಬ್ರಿಟಿಗಳು ಭೇಟಿ ನೀಡಿದಾಗ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಎಲ್ಲೆಡೆ ಪಸರಿಸುವುದಲ್ಲದೇ, ನಮ್ಮ ನಗರವು ಪ್ರವಾಸಿ ತಾಣವಾಗಿ ಬಿಂಬಿತಗೊಳ್ಳುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.

Recent Articles

spot_img

Related Stories

Share via
Copy link