ತಿರುಪತಿ:
ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾತಾಣ ಹಾಗೂ ವಿಶ್ವ ವಿಖ್ಯಾತ ತಿರುಪತಿ ತಿರುಮಲ ದೇಗುಲದಲ್ಲಿ ಅಚಾತುರ್ಯವೊಂದು ನಡೆದಿದ್ದು, ಕೆಲ ಭಕ್ತರು ಚಪ್ಪಲಿ ಧರಿಸಿ ಶ್ರೀವಾರಿ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ ಘಟನೆ ನಡೆದಿದೆ.
ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ದೇವರ ದರ್ಶನಕ್ಕೆ ಹಲವು ನಿಯಮಗಳಿದ್ದು, ಇಲ್ಲಿಗೆ ಬರುವ ಭಕ್ತರು ದೇವಸ್ಥಾನ ವಸ್ತ್ರಸಂಹಿತೆ ಸೇರಿದಂತೆ ಇನ್ನಿತ್ತರ ನಿಯಮ ಗಳನ್ನು ಪಾಲಿಸಲೇಬೇಕು. ಭಕ್ತರು ದೀರ್ಘ ಕ್ಯೂ ನಿಂತು, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬೇಕು.
ಆದರೆ ಇತ್ತೀಚೆಗೆ ಮೂವರು ಭಕ್ತರು ನಿಯಮಗಳನ್ನು ಗಾಳಿಗೆ ತೂರಿ ಚಪ್ಪಲಿ ಧರಿಸಿ ದೇವರ ದರ್ಶನಕ್ಕೆ ಬಂದಿರುವ ಘಟನೆ ವರದಿಯಾಗಿದೆ. ಮೂವರು ಭಕ್ತರು ಚಪ್ಪಲಿ ಧರಿಸಿ ಮುಖ್ಯದ್ವಾರ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ, ಸರತಿ ಸಾಲನ್ನು ದಾಟಿ ಒಂದೇ ಬಾರಿಗೆ ದೇವಾಲಯದ ಮುಖ್ಯ ದ್ವಾರವನ್ನು ತಲುಪಿದ್ದಾರೆ.
ಸ್ವಲ್ಪ ತಡವಾಗಿದ್ದರೂ ಕೂಡ ಆ ಮೂವರು ಚಪ್ಪಲಿ ಧರಿಸಿಕೊಂಡು ದೇವಸ್ಥಾನ ಪ್ರವೇಶಿಸುತ್ತಿದ್ದರು. ಆದರೆ,ಈ ವೇಳೆ ಅಲ್ಲೇ ಕರ್ತವ್ಯದಲ್ಲಿದ್ದ ಮಹಿಳಾ ಟಿಟಿಡಿ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ಅವರಿಗೆ ಚಪ್ಪಲಿ ಧರಿಸಿ ದೇಗುಲ ಪ್ರವೇಶ ಮಾಡುವಂತಿಲ್ಲ ಎಂದು ಹೇಳಿ ಗದರಿದ್ದಾರೆ. ಕೊನೆಗೆ ಈ ಮೂವರು ತಮ್ಮ ಚಪ್ಪಲಿಯನ್ನು ಮುಖ್ಯದ್ವಾರದಲ್ಲೇ ಬಿಟ್ಟು ದೇವಾಲಯದೊಳಗೆ ಪ್ರವೇಶಿಸಿದ್ದಾರೆ.
ಇನ್ನು ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, greatandhra ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವತ್ತೇಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವಿಜಿಲೆನ್ಸ್, ಟಿಟಿಡಿ ಅಧಿಕಾರಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಇನ್ನು ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವೆಂಕಟೇಶ್ವರ ಸ್ವಾಮಿ ಭಕ್ತರು ಅವಿವೇಕಿಗಳಿಂದ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ. ಆದರೆ ಅವರು ದೇಗುಲದ ಮುಖ್ಯದ್ವಾರದ ವರೆಗೂ ಚಪ್ಪಿಲಿ ಧರಿಸಿ ಬರಲು ಅನುವು ಮಾಡಿಕೊಟ್ಟವರಾರು.. ಟಿಟಿಡಿ ಸಿಬ್ಬಂದಿ ಏನು ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.








