ಬೆಳಗಾವಿ:
ಮಹಾದಾಯಿ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸರಕಾರ ಒಪ್ಪಿಗೆಯನ್ನೆ ಕೊಡುತ್ತಿಲ್ಲ. ಒಪ್ಪಿಗೆ ಕೊಟ್ಟಿದ್ದೇ ಆದರೆ, ಯೋಜನೆಗಳನ್ನು ಆರಂಭಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಘೋಷಿಸಿದರು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕೃಷಿ ಇಲಾಖೆ ಸಹಾಯಧನದ ಅಡಿಯಲ್ಲಿ ಸುಮಾರು ರೂ,400 ಕೋಟಿ ವೆಚ್ಚದ ಕೃಷಿ ಯಂತ್ರಗಳು ಮತ್ತು ಸಲಕರಣೆಗಳನ್ನು ರೈತರಿಗೆ ವಿತರಿಸಿ, ಮಾತನಾಡಿದರು.
ಅರಣ್ಯ ಇಲಾಖೆ ಅನುಮತಿ ದೊರಕದಿರುವುದರಿಂದ ಮಹದಾಯಿ ಯೋಜನೆ ವಿಳಂಬವಾಗುತ್ತಿದೆ. ಕೇಂದ್ರ ಸರಕಾರ ಅನುಮತಿ ನೀಡಿದರೆ ನಾಳೆಯೇ ಕಾಮಗಾರಿ ಆರಂಭ ಮಾಡುತ್ತೇವೆ ಎಂದು ಹೇಳಿದರು.
ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಸೇರಿದಂತೆ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ತಕ್ಷಣ ಆರಂಭಿಸಲು ರಾಜ್ಯ ಸರಕಾರ ಸಿದ್ಧವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸುವ ಮೂಲಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಮಹದಾಯಿ ಯೋಜನೆ ವಿಳಂಬವಾಗಲು ಕೇಂದ್ರ ಸರಕಾರವೇ ಕಾರಣ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ಬಂದರೆ ಮರುದಿನವೇ ಮಹದಾಯಿ ಯೋಜನೆ ಆರಂಭಿಸುತ್ತೇವೆ ಎಂದಿದ್ದರು. ಆದರೆ, ಏನೂ ಮಾಡಲಿಲ್ಲ. ಕೇಂದ್ರದಲ್ಲಿ ನಮ್ಮ ಸಂಸದರು ಮಾತನಾಡುವುದಿಲ್ಲ. ಇಲ್ಲಿ ಬಂದು ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆಂದು ಕಿಡಿಕಾರಿದರು.
ಬಳಿಕ ರೈತರಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಅವರು, ಒಣ ಬೇಸಾಯಗಾರರಿಗೆ ಅನುಕೂಲ ಕಲ್ಪಿಸಲು ಕೃಷಿ ಭಾಗ್ಯ ಜಾರಿಗೆ ತರಲಾಗಿದ್ದು, 200 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಕಳೆದ ವರ್ಷ 25,000 ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಸರ್ಕಾರದಿಂದ ನೀರಾವರಿಗೆ ಆದ್ಯತೆ ನೀಡಲಾಗಿದ್ದು, ಬೃಹತ್ ಮತ್ತು ಸಣ್ಣ ನೀರಾವರಿಗೆ 25 ಸಾವಿರ ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
