ದಾವಣಗೆರೆ:
ರಾಜ್ಯದಲ್ಲಿ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಅಭೂತಪೂರ್ವ ಯಶಸ್ಸು ಸಿಕ್ಕು ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಜನಾಕ್ರೋಶ ಯಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ಚಾಟಿ ಬೀಸಲಾಗಿತ್ತು. ಬಿಜೆಪಿ ಜನಾಕ್ರೋಶದಿಂದ ಸರ್ಕಾರಕ್ಕೆ ಬಿಸಿ ತಟ್ಟಿದ ತಕ್ಷಣವೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬೆಳಗಾವಿ ಜಿಲ್ಲಾ ಪ್ರವಾಸ ಮಾಡಿದ್ದಾರೆ ಎಂದರು.
ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆ ವಿರೋಧಿಸಿ ರಾಜ್ಯದ 10 ಜಿಲ್ಲೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಜನರಿಗೆ ಮನದಟ್ಟು ಮಾಡಲಿದೆ. ಮೈಸೂರು ಜಿಲ್ಲೆ ಮುಗಿಸಿಕೊಂಡು ಈಗ ದಾವಣಗೆರೆ ಜಿಲ್ಲೆಗೆ ಬಂದಿದ್ದೇವೆ. ಬಳಿಕ ಹಾವೇರಿ ಜಿಲ್ಲೆಯಲ್ಲಿ ಮುಗಿಸಿಕೊಂಡ ನಾಳೆ ಗದಗ, ಕೊಪ್ಪಳ ಜಿಲ್ಲೆಗೆ ಭೇಟಿ ನೀಡಲಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಕೂಡ ಜನಾಕ್ರೋಶ ಯಾತ್ರೆಗೆ ಉತ್ಸಾಹ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶವೂ ಹೆಚ್ಚಾಗಿದೆ. ಹೀಗಾಗಿ ಪಂಚ ಗ್ಯಾರಂಟಿಗಳ ಭ್ರಮೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ವಾಸ್ತಾಂಶ ಅರಿತುಕೊಳ್ಳಬೇಕೆಂದು ಆಗ್ರಹಿಸಿದರು.
