ಚೆನ್ನೈ:
ರಾಷ್ಟ್ರ ಪ್ರಶಸ್ತಿ ಕಲಾವಿದರಾದ ಧನುಷ್ ನಿತ್ಯಾ ಮೆನನ್ ತೆರೆಮೇಲೆ 2ನೇ ಬಾರಿ ಒಂದಾಗುತ್ತಿರುವ, ಈ ವರ್ಷದ ಬಹು ನಿರೀಕ್ಷಿತ ‘ಇಡ್ಲಿ ಕಡೈ’ ತಮಿಳು ಚಿತ್ರದ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಮಿಳುನಾಡಿನ ಥೆನಿ ಜಿಲ್ಲೆಯ ಅನುಪಪಟ್ಟಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ʼ ʼಘಟನೆಗೂ ಮುನ್ನ ಚಿತ್ರತಂಡ ಇಲ್ಲಿನ ಶೂಟಿಂಗ್ ಮುಗಿಸಿ ತೆರಳಿದ್ದರಿಂದ ಸಂಭವಿಸಬಹುದಾದ ಬಹುದೊಡ್ಡ ಅನಾಹುತ ತಪ್ಪಿದೆʼʼ ಎಂದು ವರದಿಯೊಂದು ವಿವರಿಸಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.
ಬೆಂಕಿ ಆಕಸ್ಮಿಕ ಹೇಗೆ ಉಂಟಾಯಿತು ಎನ್ನುವ ಬಗ್ಗೆ ತಕ್ಷಣಕ್ಕೆ ಮಾಹಿತಿ ತಿಳಿದಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಪ್ರೊಡಕ್ಷನ್ ಟೀಮ್ ತಮ್ಮ ತಂಡದವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದೆ. ಸದ್ಯಕ್ಕೆ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಸ್ಥಿತಿ ಯಥಾಸ್ಥಿತಿಗೆ ಬಂದ ಬಳಿಕ ಶೂಟಿಂಗ್ ಪುನರಾರಂಭವಾಗಲಿದೆ.
ಕಾಲಿವುಡ್ನ ಪ್ರತಿಭಾವಂತ ನಟರಲ್ಲಿ ಒಬ್ಬರೆನಿಸಿಕೊಂಡಿರುವ ಧನುಷ್ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರ ‘ಇಡ್ಲಿ ಕಡೈ’. 2017ರಲ್ಲಿ ತೆರೆಕಂಡ ʼಪಾ. ಪಾಂಡಿʼ ಚಿತ್ರದ ಮೂಲಕ ನಿರ್ದೇಶನಕ್ಕಿದ ಧನುಷ್ ಆ್ಯಕ್ಷನ್ ಕಟ್ ಹೇಳುತ್ತಿರುವ 4ನೇ ಚಿತ್ರ ಇದು. ಈ ಸಿನಿಮಾದಲ್ಲಿ ಧನುಷ್, ನಿತ್ಯಾ ಮೆನನ್ ಜತೆಗೆ ಅರುಣ್ ವಿಜಯ್, ಶಾಲಿನಿ ಪಾಂಡೆ, ಪ್ರಕಾಶ್ ರಾಜ್, ರಾಜ್ಕಿರಣ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಹಾಕಲಾಗಿದ್ದ ಅಂಗಡಿ, ಮನೆಗಳನ್ನು ಒಳಗೊಂಡಿರುವ ಬೀದಿಯ ಸೆಟ್ ಇದೀಗ ಬೆಂಕಿಗೆ ಆಹುತಿಯಾಗಿದೆ.
ಇತ್ತೀಚೆಗೆ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕವನ್ನು ಘೋಷಿಸಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಅ. 1ರಂದು ಬಿಡುಗಡೆಯಾಗಲಿದೆ. ಬಹುತಾರಾಗಣದಿಂದ ಈ ಚಿತ್ರ ಈಗಾಗಲೇ ಗಮನ ಸೆಳೆದಿದೆ. ಇದೀಗ ಅಂದುಕೊಂಡ ದಿನಕ್ಕೆ ರಿಲೀಸ್ ಮಾಡಲು ಸಿನಿಮಾತಂಡ ಕಾರ್ಯ ಪ್ರವೃತ್ತವಾಗಿದ್ದು, ಆದಷ್ಟು ಶೀಘ್ರದಲ್ಲೇ ಶೂಟಿಂಗ್ ಮುಗಿಸಲು ಮುಂದಾಗಿದೆ.
2022ರಲ್ಲಿ ತೆರೆಕಂಡ ʼತಿರುಚಿತ್ರಾಂಬಲಮ್ʼ ಸಿನಿಮಾದಲ್ಲಿ ಧನುಷ್ ಮತ್ತು ನಿತ್ಯಾ ಮೆನನ್ ಮೊದಲ ಬಾರಿಗೆ ಜತೆಗೆ ನಟಿಸಿದ್ದರು. ಈ ಚಿತ್ರದಲ್ಲಿ ಅಭಿನಯಕ್ಕಾಗಿ ನಿತ್ಯಾ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಹಿಂದೆ ಧನುಷ್ 2 ಬಾರಿ ನ್ಯಾಶನಲ್ ಅವಾರ್ಡ್ ಪಡೆದುಕೊಂಡಿದ್ದರು. ಹೀಗಾಗಿ ಇವರು 2ನೇ ಬಾರಿ ಒಂದಾಗುತ್ತಿದ್ದಾರೆ ಎನ್ನುವಾಗಲೇ ಕುತೂಹಲ ಮೂಡಿತ್ತು.
ವಿಶೇಷ ಎಂದರೆ ʼಇಡ್ಲಿ ಕಡೈʼ ಮತ್ತೊಂದು ಬಹುನಿರೀಕ್ಷಿತ ಚಿತ್ರ, ಸ್ಯಾಂಡಲ್ವುಡ್ನ ʼಕಾಂತಾರ ಚಾಪ್ಟರ್ 1ʼನೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ನಡೆಸಲಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಇದು ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದೆ. ಎರಡೂ ಚಿತ್ರಗಳಲ್ಲಿ ನಾಯಕ ಮತ್ತು ನಿರ್ದೇಶಕ ಒಬ್ಬರೇ ಎನ್ನುವುದು ವಿಶೇಷ. ಬಾಕ್ಸ್ ಆಫೀಸ್ ಸ್ಪರ್ಧೆಯತಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಕಾದು ನೀಡಬೇಕಿದೆ.
