ರಸ್ತೆಯಲ್ಲಿ ಕಸ ಹಾಕಬೇಡಿ ಅಂದಿದ್ದಕ್ಕೆ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗ ಥಳಿತ

ಬೆಂಗಳೂರು:

   ರಸ್ತೆಯಲ್ಲಿ ಕಸ ಹಾಕಬೇಡಿ ಎಂದು ಹೇಳಿದ್ದಕ್ಕೆ ಕೆಲವು ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಲೇಜು ಪ್ರಾಧ್ಯಾಪಕರೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹಲ್ಲೆಯಲ್ಲಿ ನನ್ನ ದವಡೆ ಮುರಿದಿದೆ ಎಂದು ಪ್ರಾಧ್ಯಾಪಕ ಅರಬಿಂದೋ ಗುಪ್ತಾ ಹೇಳಿದ್ದಾರೆ. ಪ್ರಾಧ್ಯಾಪಕರು ನೀಡಿದ ಮಾಹಿತಿಯ ಆಧಾರದ ಮೇಲೆ ಕುಮಾರಸ್ವಾಮಿ ಲೇಔಟ್ ಪೊಲೀಸರು ದೂರು ದಾಖಲಿಸಿದ್ದಾರೆ.

   ನಿನ್ನೆ ಸಂಜೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕೆಲವರು ರಸ್ತೆಯಲ್ಲಿ ಕಸ ಹಾಕುತ್ತಿರುವುದನ್ನು ನೋಡಿದ್ದಾರೆ. ಕಸದಿಂದಾಗಿ ತಮ್ಮ ವಾಹನ ಸ್ಕಿಡ್ ಆಗಬಹುದು ಎಂಬ ಆತಂಕದಿಂದ ಅವರು ಕಸ ಹಾಕದಂತೆ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ಹೆಲ್ಮೆಟ್‌ನಿಂದ ಹೊಡೆದಿದೆ ಎಂದು ಗುಪ್ತಾ ಹೇಳಿಕೊಂಡಿದ್ದಾರೆ. ಹಲ್ಲೆಗೆ ಸಾಕ್ಷಿಯಾಗಿ ತಮ್ಮ ಗಾಯಗಳನ್ನು ತೋರಿಸುವ ವೀಡಿಯೊವನ್ನು ಪ್ರಾಧ್ಯಾಪಕರು ಪೊಲೀಸರಿಗೆ ನೀಡಿದ್ದು ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.