ಶ್ರೀನಗರ
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ಸಮಯದಲ್ಲಿ ಪುರುಷರ ಪ್ಯಾಂಟ್ ಬಿಚ್ಚಿಸಿ, ಐಡಿ ಪರಿಶೀಲಿಸಿ ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ಸಿಒಎಎಸ್ ಅಸಿಮ್ ಮುನೀರ್ ಹಿಂದೂಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.
ಘಟನೆಯ ಹೃದಯ ವಿದ್ರಾವಕ ದೃಶ್ಯ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಹುಲ್ಲುಹಾಸಿನ ಮೇಲೆ ಉದ್ದಕ್ಕೂ ಮೃತದೇಹಗಳು ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಾಳಿಯ ಪ್ರತ್ಯಕ್ಷದರ್ಶಿಗಳು ಭಯೋತ್ಪಾದಕರು ಪ್ರವಾಸಿಗರನ್ನು ಹಿಂದೂಗಳೆಂದು ಕನ್ಫರ್ಮ್ ಮಾಡಿಕೊಂಡ ಬಳಿಕವೇ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ದಾಳಿ ಧಾರ್ಮಿಕ ಪ್ರೇರಿತವಾಗಿದೆ ಎಂದಿದ್ದಾರೆ.
ವೈರಲ್ ಆದ ಫೋಟೊವೊಂದರಲ್ಲಿ ನವವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ಶವದ ಬಳಿ ಅಸಹಾಯಕಳಾಗಿ ಕುಳಿತಿರುವುದನ್ನು ಕಾಣಬಹುದು. ಆ ಮಹಿಳೆ ಇತ್ತೀಚೆಗಷ್ಟೇ ವಿವಾಹವಾಗಿದ್ದರು, ಹನಿಮೂನ್ಗೆಂದು ಕಾಶ್ಮೀರಕ್ಕೆ ಬಂದಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದು, ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಸ್ಥಳೀಯ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ನಿರ್ಣಯಿಸುವಂತೆ ನಿರ್ದೇಶಿಸಿದ್ದಾರೆ. 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಪುಣೆಯ ಉದ್ಯಮಿ ಸಂತೋಷ್ ಜಗದಾಳೆ ಅವರ ಮಗಳು ಮಾತನಾಡಿ, ಭಯೋತ್ಪಾದಕರು ತಂದೆಯ ಬಳಿ ಇಸ್ಲಾಮಿಕ್ ಪಠಣ ಮಾಡಲು ಕೇಳಿಕೊಂಡರು. ಅದು ಸಾಧ್ಯವಾಗದಿದ್ದಾಗ, ಅವರು ಒಮ್ಮೆ ತಲೆಗೆ, ನಂತರ ಕಿವಿಯ ಹಿಂದೆ ಮತ್ತು ನಂತರ ಬೆನ್ನಿಗೆ ಗುಂಡು ಹಾರಿಸಿದರು.
ಭಾರತದಲ್ಲಿ ನಡೆದ ಹಲವಾರು ಪ್ರಮುಖ ಭಯೋತ್ಪಾದಕ ದಾಳಿಗಳೊಂದಿಗೆ ಖಾಲಿದ್ ಹೆಸರಿದೆ. ಸೌದಿ ಅರೇಬಿಯಾದಿಂದ ಬಂದಿಳಿದ ನಂತರ ಬುಧವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಸಭೆ ನಡೆಸಿದರು. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ಮೋದಿ ತಮ್ಮ ಎರಡು ದಿನಗಳ ಸೌದಿ ಅರೇಬಿಯಾ ಭೇಟಿಯನ್ನು ಮೊಟಕುಗೊಳಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕಾಂಗ್ರೆಸ್‌ನ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ತಾರಿಕ್ ಕರ್ರಾ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
