ಶ್ರೀನಗರ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣ ಬೈಸರನ್ನಲ್ಲಿ ಮಂಗಳವಾರ ಭಯೋತ್ಪಾದಕ ದಾಳಿ ನಡೆದಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಇದುವರೆಗೆ 26 ಜನರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಪ್ರವಾಸಿಗರು. 2019 ರಲ್ಲಿ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.
ಕೊಲ್ಲಲ್ಪಟ್ಟವರಲ್ಲಿ ಇಬ್ಬರು ವಿದೇಶಿಯರು (ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ನೇಪಾಳದವರು) ಮತ್ತು ಇಬ್ಬರು ಸ್ಥಳೀಯ ನಿವಾಸಿಗಳು ಸೇರಿದ್ದಾರೆ. 26 ಜನರಲ್ಲಿ 22 ಜನರನ್ನು ಗುರುತಿಸಲಾಗಿದ್ದು, ಉಳಿದವರನ್ನು ಗುರುತಿಸಲಾಗುತ್ತಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಹೊತ್ತುಕೊಂಡಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಭಯೋತ್ಪಾದಕ ಸೈಫುಲ್ಲಾ ಖಾಲಿದ್. ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಮತ್ತು ಟಿಆರ್ಎಫ್ನ ಭಯೋತ್ಪಾದಕ ಚಟುವಟಿಕೆಗಳ ಪ್ರಮುಖ ನಿರ್ವಾಹಕ ಸೈಫುಲ್ಲಾ. ಸೈಫುಲ್ಲಾ ಖಾಲಿದ್ನನ್ನು ಸೈಫುಲ್ಲಾ ಕಸೂರಿ ಎಂದೂ ಕರೆಯುತ್ತಾರೆ. ಆತ ಲಷ್ಕರ್ ಎ ತೊಯ್ಬಾ ಉಪ ಮುಖ್ಯಸ್ಥನಾಗಿದ್ದಾನೆ, ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್ಗೆ ಆಪ್ತ ಎಂದು ಪರಿಗಣಿಸಲಾಗಿದೆ. ಸೈಫುಲ್ಲಾಗೆ ಐಷಾರಾಮಿ ಕಾರುಗಳೆಂದರೆ ಇಷ್ಟ, ಆತನಿಗೆ ಭಾರತದ ಪ್ರಧಾನಿಗಿಂತ ಹೆಚ್ಚಿನ ಭದ್ರತೆ ಇದೆಯಂತೆ.
ಸೈಫುಲ್ಲಾ ಖಾಲಿದ್ ಪಾಕಿಸ್ತಾನದಲ್ಲಿ ಎಷ್ಟು ಪ್ರಭಾವ ಹೊಂದಿದ್ದಾನೆಂದರೆ ಪಾಕಿಸ್ತಾನಿ ಸೇನಾ ಅಧಿಕಾರಿಗಳು ಆತನ ಮೇಲೆ ಹೂಮಳೆ ಸುರಿಸಿ ಬರಮಾಡಿಕೊಳ್ಳುತ್ತಾರೆ. ಆತ ಪಾಕಿಸ್ತಾನದಲ್ಲಿ ವಿಐಪಿಯಂತೆ ಓಡಾಡುತ್ತಾನೆ. ಸೈಫುಲ್ಲಾ ಎರಡು ತಿಂಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಪಂಜಾಬ್ನ ಕಂಗನ್ಪುರ ಪ್ರದೇಶಕ್ಕೆ ಬಂದಿದ್ದ, ಅಲ್ಲಿ ಒಂದು ಕಾರ್ಯಕ್ರಮವನ್ನು ಪಾಕಿಸ್ತಾನಿ ಸೇನೆಯ ಕರ್ನಲ್ ಜಾಹಿದ್ ಜರೀನ್ ಖಟ್ಟಕ್ ಆಯೋಜಿಸಿದ್ದರು.
ಅಲ್ಲಿ ಖಾಲಿದ್ ಭಾರತೀಯ ಸೇನೆ ಮತ್ತು ಭಾರತದ ಜನರ ವಿರುದ್ಧ ಉಗ್ರ ಭಾಷಣ ಮಾಡಿದ್ದ. ಖೈಬರ್ ಪಖ್ತುಂಖ್ವಾದಲ್ಲಿ ನಡೆದ ಸಭೆಯಲ್ಲಿ ಸೈಫುಲ್ಲಾ ವಿಷ ಕಾರಿದ್ದ. ಆತ ಭಾಷಣದಲ್ಲಿ 2026ರ ಫೆಬ್ರವರಿ ಹೊತ್ತಿಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದ. ನಮ್ಮ ಮುಜಾಹಿದ್ದೀನ್ಗಳು ಮುಂದಿನ ದಿನಗಳಲ್ಲಿ ದಾಳಿಯನ್ನು ತೀವ್ರಗೊಳಿಸುತ್ತವೆ.ಫೆಬ್ರವರಿ 2, 2026 ರ ವೇಳೆಗೆ ಕಾಶ್ಮೀರ ಸ್ವತಂತ್ರವಾಗುವ ಭರವಸೆ ಇದೆ ಎಂದಿದ್ದ.
ಲಷ್ಕರೆ ರಾಜಕೀಯ ವಿಭಾಗಗಳಾದ ಪಿಎಂಎಂಎಲ್ ಮತ್ತು ಎಸ್ಎಂಎಲ್ ಅಬೋಟಾಬಾದ್ ಅರಣ್ಯಗಳಲ್ಲಿ ಭಯೋತ್ಪಾದಕ ಶಿಬಿರವನ್ನು ಆಯೋಜಿಸಿದ್ದವು. ಕಾಶ್ಮೀರದಲ್ಲಿ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಐಎಸ್ಐ ಟಿಆರ್ಎಫ್ ಅನ್ನು ರಚಿಸಿತು. ಟಿಆರ್ಎಫ್ ಅನ್ನು ಲಷ್ಕರೆ ಹಣಕಾಸು ಮಾರ್ಗಗಳ ಮೂಲಕ ನಡೆಸಲಾಗುತ್ತದೆ. ಗುಪ್ತಚರ ಸಂಸ್ಥೆ ‘ರಾ’ ಮತ್ತು ಭಾರತೀಯ ಸೇನೆಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಸೈಫುಲ್ಲಾ ಖಾಲಿದ್ ಪಾಕಿಸ್ತಾನಿ ಸೇನೆಯ ವಿಶೇಷ ವ್ಯಕ್ತಿ ಮಾತ್ರವಲ್ಲದೆ, ಭಾರತದ ನಂಬರ್ ಒನ್ ಶತ್ರು ಹಫೀಜ್ ಸಯೀದ್ನ ಬಲಗೈ ಬಂಟ ಕೂಡ.
ಹಫೀಜ್ ಸಯೀದ್ ಮತ್ತು ಸೈಫುಲ್ಲಾ ಖಾಲಿದ್ ನಡುವಿನ ಸ್ನೇಹ ತುಂಬಾ ಗಾಢವಾದದ್ದು. ಪಹಲ್ಗಾಮ್ ದಾಳಿಯ ನಂತರವೇ ಸೈಫುಲ್ಲಾ ಖಾಲಿದ್ ಭಾರತೀಯ ಏಜೆನ್ಸಿಗಳ ಗಮನಕ್ಕೆ ಬಂದಿದ್ದಾನೆ. ಮುಂಚೆಯೂ ಅವರು ಕಾಶ್ಮೀರ ಕಣಿವೆಯಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ.







