ಮತ್ತೊಮ್ಮೆ ನಾಲಗೆ ಹರಿಬಿಟ್ಟ ಪಾಕ್‌ ಕ್ರಿಕೆಟ್‌ ಆಟಗಾರ….!

ಜಮ್ಮು ಮತ್ತು ಕಾಶ್ಮೀರ

    ಪಹಲ್ಗಾಮ್‌ನಲ್ಲಿ  ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಈ ಭೀಕರ ದಾಳಿಯಲ್ಲಿ 28 ಅಮಾಯಕರು ಮೃತಪಟ್ಟಿದ್ದಾರೆ. ಈ ದುಷ್ಕೃತ್ಯದ ಹೊಣೆಯನ್ನು ಪಾಕ್ ಬೆಂಬಲಿತ LeT-TRF ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದರ ಬೆನ್ನಲ್ಲೇ  ಭಯೋತ್ಪಾದಕ ದಾಳಿಯ ಹಿಂದೆ ತನ್ನದೇ ದೇಶದ ಕೈವಾಡವಿದೆ ಎಂದು ಪಾಕಿಸ್ತಾನದ ಕ್ರಿಕೆಟಿಗ ದಾನಿಶ್ ಕನೇರಿಯಾ ಆರೋಪಿಸಿದ್ದಾರೆ.

    ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಾನಿಶ್ ಕನೇರಿಯಾ, ಪಾಕಿಸ್ತಾನ್ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದರೆ, ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದರೆ ನಾಚಿಕೆಪಡಬೇಕು. ಇಂತಹ ಕೃತ್ಯಗಳ ಬಗ್ಗೆ ಜಾಣಮೌನವಹಿಸುವ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತದ ಕಡೆಯಿಂದ ಕ್ರಮ ಆರಂಭವಾಗಿದೆ. ರಾಜತಾಂತ್ರಿಕವಾಗಿ, ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಹಾನಿ ಉಂಟುಮಾಡುವ ಹಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಏತನ್ಮಧ್ಯೆ, ವಿಶ್ವದ ಹಲವು ದೇಶಗಳು ಮತ್ತು ಉನ್ನತ ನಾಯಕರು ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಭಾರತದೊಂದಿಗೆ ನಿಲ್ಲುವ ಬಗ್ಗೆ ಮಾತನಾಡಿದ್ದಾರೆ.

   ಇದಾಗ್ಯೂ ಈ ದುಷ್ಕೃತ್ಯವನ್ನು ಖಂಡಿಸುವ ಯಾವುದೇ ಹೇಳಿಕೆ ಪಾಕಿಸ್ತಾನ್ ಸರ್ಕಾರದಿಂದ ಕೇಳಿ ಬಂದಿಲ್ಲ. ಇದನ್ನೇ ಈಗ ಪಾಕ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಪ್ರಶ್ನಿಸಿದ್ದಾರೆ.ಪಹಲ್ಗಾಮ್‌ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ದಾನಿಶ್ ಕನೇರಿಯಾ, ಈ ದಾಳಿಯಲ್ಲಿ ನಿಜವಾಗಿಯೂ ಪಾಕಿಸ್ತಾನದ ಯಾವುದೇ ಕೈವಾಡವಿಲ್ಲದಿದ್ದರೆ, ನಮ್ಮ ಪ್ರಧಾನಿ ಶಹಬಾಜ್ ಷರೀಫ್ ಆ ವಿಷಯದ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

    ಅತ್ತ ಭಾರತದಲ್ಲಿ ದಾಳಿಯಾಗುತ್ತಿದ್ದಂತೆ ಇತ್ತ ಪಾಕಿಸ್ತಾನದಲ್ಲಿ ಸೇನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಎಚ್ಚರಿಕೆ ವಹಿಸಲು ಏಕೆ ಹೇಳಲಾಯಿತು? ಏಕೆಂದರೆ ನಿಮಗೆ ಸತ್ಯ ಗೊತ್ತಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ದಾನಿಶ್ ಕನೇರಿಯಾ ಸೋಷಿಯಲ್ ಮೀಡಿಯಾ ಮೂಲಕ ಪಾಕಿಸ್ತಾನ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

    ಅಂದಹಾಗೆ ದಾನಿಶ್ ಕನೇರಿಯಾ ಪಾಕಿಸ್ತಾನ್ ತಂಡವನ್ನು ಪ್ರತಿನಿಧಿಸಿದ ಹಿಂದೂ ಕ್ರಿಕೆಟಿಗ. 2000 ರಲ್ಲಿ ಪಾಕ್ ತಂಡದಲ್ಲಿ ಸ್ಪಿನ್ನರ್​ ಆಗಿ ಸ್ಥಾನ ಪಡೆದ ದಾನಿಶ್ 61 ಟೆಸ್ಟ್ ಪಂದ್ಯಗಳಿಂದ ಒಟ್ಟು 261 ವಿಕೆಟ್ ಕಬಳಿಸಿದ್ದರು. ಹಾಗೆಯೇ 18 ಏಕದಿನ ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ. ಇದೀಗ ಭಾರತದ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ಪಾಕಿಸ್ತಾನ್ ಸರ್ಕಾರದ ನಡೆಯನ್ನು ಪ್ರಶ್ನಿಸಿ ಗಮನ ಸೆಳೆದಿದ್ದಾರೆ.