ನಾಯಕನಹಟ್ಟಿ :
ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಭಾಷ ರವರಿಂದ ಸರ್ಕಾರಿ ಜಾಗ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದಾರೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಬಿ.ಜೆ.ಪಿ. ಮುಖಂಡ ಪಟೇಲ್ ಕೆ.ಬಿ.ಕೃಷ್ಣಗೌಡ ಗಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯಕನಹಟ್ಟಿ ರಿ.ಸ.ನಂ.216/1, 216/2, 215ರಲ್ಲಿ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಭಾಷ ರವರು ಅಭಿವೃದ್ಧಿ ಪಡಿಸುತ್ತಿರುವ ಖಾಸಗಿ ಲೇಔಟ್ನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಾರಭಾವಿ ಚಳ್ಳಕೆರೆ ರಸ್ತೆಯ ಸುಮಾರು 10×200 ಮೀಟರ್ಗಳಷ್ಟು ಸರ್ಕಾರಿ ಜಾಗವನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಒತ್ತುವರಿ ಮಾಡಿಕೊಂಡು ಸರ್ಕಾರಿ ಜಾಗವನ್ನು ಕಬಳಿಸಿ ಖಾಸಗಿ ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಈ ಹಿಂದೆ ಇದೇ ಕೆ.ಅನ್ವರ್ ಭಾಷರವರು ಚಳ್ಳಕೆರೆ ನಗರದ ಜಾಫರ್ ಷರೀಫ್ ಲೇಔಟ್ನಲ್ಲಿಯೂ ಕೂಡ ಸುಮಾರು 30 ಗುಂಟೆ ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡಿದ್ದು, ಕೆ.ಅನ್ವರ್ಭಾಷರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಗರ ಮತ್ತು ಗ್ರಾಮಾಂತರ ಯೋಜನೆಯ ಇಲಾಖೆಯವರ ನಕಾಶೆಯಂತೆ ಲೇಔಟ್ ನಿರ್ಮಿಸದೆ ರಾಜ್ಯ ಹೆದ್ದಾರಿಯ ಜಾಗವನ್ನು ಒತ್ತುವರಿ ಮಾಡಿ ಒಳಚರಂಡಿ ಹಾಗೂ ಚರಂಡಿಯನ್ನು ನಿರ್ಮಿಸಿರುತ್ತಾರೆ.
ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿಸಿ ನೋಡಿದಾಗ ಒತ್ತುವರಿಯಾಗಿರುವುದು ಕಂಡುಬಂದಿದ್ದು, ಒತ್ತುವರಿ ಜಾಗವನ್ನು ತೆರೆವುಗೊಳಿಸುವಂತೆ ನೋಟೀಸ್ ಜಾರಿಗೊಳಿಸಲಾಗಿದೆ.-ಹಕೀಂ ಇಂಜಿನಿಯರ್ ಲೊಕೋಪಯೋಗಿ ಇಲಾಖೆ, ಚಳ್ಳಕೆರೆ.
ಲೊಕೋಪಯೋಗಿ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿದಾಗ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಬಿಲ್ಟರ್ಗಳು ಯಾವುದೇ ಮುನ್ಸೂಚನೆ ಹಾಗೂ ಅನುಮತಿ ಪಡೆಯದೇ ಲೇಔಟ್ ನಿರ್ಮಿಸಿದ್ದು, ಒತ್ತುವರಿ ಸ್ಥಳವನ್ನು ತೆರೆವುಗೊಳಿಸುವಂತೆ ನೋಟೀಸ್ ಜಾರಿಗೊಳಿಸಲಾಗಿದೆ.-ಓ.ಶ್ರೀನಿವಾಸ್, ಮುಖ್ಯಾಧಿಕಾರಿಗಳು, ಪ.ಪಂ. ನಾಯಕನಹಟ್ಟಿ
