ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಪದೇ ಪದೇ ಎಡವಟ್ಟುಗಳು ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ದುರಂತದ ದೌರ್ಭಾಗ್ಯವೇ ಸರಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ದುರಾಡಳಿತ, ಭ್ರಷ್ಟ ಸರ್ಕಾರದಿಂದ ವರ್ಷಾನುಗಟ್ಟಲೆ ಓದಿದ ವಿದ್ಯಾರ್ಥಿಗಳ ಭವಿಷ್ಯವನ್ನು ಅಡಕತ್ತರಿಗೆ ಸಿಲುಕುವಂತೆ ಮಾಡಿದೆ. ಈಗಾಗಲೇ ನಿಮ್ಮ ಆಡಳಿತದ ಸರ್ಕಾರ ಬೆಲೆ ಏರಿಕೆಯಿಂದ ಜನರ ದಿನ ನಿತ್ಯದ ಜೀವನವನ್ನೇ ದುಸ್ತರ ಮಾಡಿದ್ದು, ಈಗ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ.
ನಿಮ್ಮ ಅಧಿಕಾರದಲ್ಲಿ ಆಡಳಿತ, ಕಾರ್ಯತತ್ಪರತೆ ಯಾವ ರೀತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದಕ್ಕೆ ಕೆ.ಪಿ.ಎಸ್.ಸಿ ಈ ಪರೀಕ್ಷೆಯಲ್ಲಿ ಆದ ಲೋಪದೋಷಗಳೇ ನಿದರ್ಶನ. ಸತತವಾಗಿ ನಡೆಯುತ್ತಿರುವ ಈ ಕೆಪಿಎಸ್ಸಿ ಸಂಸ್ಥೆಯ ಪರೀಕ್ಷೆಯ ಪ್ರಹಸನಗಳು, ತರಾತುರಿಯಲ್ಲಿ ನಡೆಸುತ್ತಿರುವ ಪರೀಕ್ಷೆ ಯಾರ ಸುಖಕ್ಕಾಗಿ? ಕಾರು ಪಂಕ್ಚರ್ ನಾಟಕ, ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ತಪ್ಪು ಪ್ರಶ್ನೆಗಳು ಮುದ್ರಣ. ಕೆಪಿಎಸ್ಸಿ ನಡೆಸುತ್ತಿರುವ ಈ ದುರಂತ ಪರೀಕ್ಷೆ ಅಭ್ಯರ್ಥಿಗಳ ಮನೋಸ್ಥೈರ್ಯ ಕುಗ್ಗಿತ್ತಿದೆ.
ಭವಿಷ್ಯದ ಕನಸ್ಸನ್ನು ಹೊತ್ತು ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಟ್ಟಲೇ ಅಭ್ಯಾಸಮಾಡಿ ಈ ಪರೀಕ್ಷೆ ಬರೆಯುತ್ತಾರೆ. ಅವರ ಪರಿಶ್ರಮ, ಅಭ್ಯಾಸದ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ವಲ್ಪಾದರು ಅರಿವಿದಿಯೇ? ಈ ಬೇಜವ್ದಾರಿತನಕ್ಕೆ ಕಾರಣರಾದವರು ಯಾರು? ಅವರ ವಿರುದ್ಧ ಕೂಡಲೇ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಎಲ್ಲ ಅವಘಡಕ್ಕೆ ಸರ್ಕಾರವೇ ನೇರ ಕಾರಣ ಎಂದಿದ್ದಾರೆ.
