ತುಮಕೂರಿನಲ್ಲಿ ಕ್ರಿಕೆಟ್ ಮೈದಾನ: 41ಎಕರೆ ಸ್ವಾಧೀನ ಪತ್ರ ಹಸ್ತಾಂತರಿಸಿದ ಸಚಿವ ಎಂ ಬಿ ಪಾಟೀಲ

ಬೆಂಗಳೂರು:

   ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆ.ಎಸ್.ಸಿ.ಎ) ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು.

   ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಈಗ ಕೊಟ್ಟಿರುವ ಜಾಗದ ಪಕ್ಕದಲ್ಲೇ ಇರುವ 6.5 ಎಕರೆ ಖರಾಬು ಜಮೀನನ್ನು ಕೆಎಸ್ಸಿಎಗೆ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

   ಇದಕ್ಕೆ ಸ್ಪಂದಿಸಿದ ಸಚಿವರು, ಈ ಮನವಿಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ತುಮಕೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಬರಬೇಕಾದ ಅಗತ್ಯವಿದೆ ಎಂದರು.

   ಬೆಂಗಳೂರಿಗೆ ತಾಗಿಕೊಂಡಿರುವ ತುಮಕೂರು ಜಿಲ್ಲೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಅಲ್ಲಿ ಒಂದು ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಅಗತ್ಯವಿದೆ ಎಂದು ಗೃಹ ಸಚಿವ ಪರಮೇಶ್ವರ ಕೂಡ ಹೇಳುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನಗರದ ಮಧ್ಯಭಾಗದಲ್ಲಿದೆ. ಹೀಗಾಗಿ ಇಲ್ಲಿ ಪಾರ್ಕಿಂಗ್, ಸಂಚಾರ ದಟ್ಟಣೆ ಇತ್ಯಾದಿ ಸಮಸ್ಯೆಗಳಿವೆ. ತುಮಕೂರಿನಲ್ಲೂ ಒಂದು ಕ್ರೀಡಾಂಗಣ ಬಂದರೆ ಅಲ್ಲಿನ ಪ್ರತಿಭೆಗಳಿಗೆ ಉಜ್ವಲ ಅವಕಾಶಗಳು ಸಿಗಲಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

   ವಿಜಯಪುರದಲ್ಲೂ ಇಂಥದ್ದೊಂದು ಕ್ರೀಡಾಂಗಣ ಬರಬೇಕು ಎನ್ನುವುದು ತಮ್ಮ ಕನಸಾಗಿದೆ. ಇಂತಹ ಮೈದಾನದಲ್ಲಿ ಪಂಚತಾರಾ ಹೋಟೆಲ್ ಸೇರಿ ಅನೇಕ ಅನುಕೂಲಗಳು ಬರಲಿವೆ ಎಂದು ಪಾಟೀಲ ನುಡಿದಿದ್ದಾರೆ.ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 41 ಎಕರೆ ಜಾಗವನ್ನು ರಿಯಾಯಿತಿ ದರದಲ್ಲಿ ಅಂದರೆ ಎಕರೆಗೆ ₹15 ಲಕ್ಷದಂತೆ ನೀಡಲಾಗಿದೆ ಎಂದು ಪಾಟೀಲ ಹೇಳಿದರು.ಕಾರ್ಯಕ್ರಮದಲ್ಲಿ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link