ನವದೆಹಲಿ:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೊದಲೇ ತಿಳಿದಿತ್ತು ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸುವ ಬಗ್ಗೆ ಮೂರು ದಿನಗಳ ಮೊದಲೇ ಪ್ರಧಾನಿಗೆ ಮಾಹಿತಿ ಇತ್ತು. ಗುಪ್ತಚರ ಇಲಾಖೆ ಮೊದಲೇ ಈ ಬಗ್ಗೆ ಮಾಹಿತಿ ನೀಡಿತ್ತು. ಹಾಗಾಗಿಯೇ ಅವರು, ಜಮ್ಮು-ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದರು ಎಂದು ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಅವರಿಗೆ ಮೊದಲೇ ಮಾಹಿತಿ ಇತ್ತು. ಅವರಿಗೆ ಇದು ತಿಳಿದಿದ್ದರೆ, ಅವರು ಏಕೆ ಏನನ್ನೂ ಮಾಡಲಿಲ್ಲ? ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿದೆ ಎಂದು ನನಗೆ ಮಾಹಿತಿ ಸಿಕ್ಕಿತು ಮತ್ತು ಆದ್ದರಿಂದ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದರು, ನಾನು ಇದನ್ನು ಪತ್ರಿಕೆಯಲ್ಲಿ ಓದಿದ್ದೇನೆ. ಇದರ ಬಗ್ಗೆ ಮೋದಿಗೆ ಮೊದಲೇ ತಿಳಿದಿದ್ದರೂ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಏಪ್ರಿಲ್ 22 ರಂದು, ಪಹಲ್ಗಾಮ್ ನಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಐದರಿಂದ ಆರು ಭಯೋತ್ಪಾದಕರು ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿದರು. ‘ಮಿನಿ ಸ್ವಿಟ್ಜರ್ಲೆಂಡ್’ ಎಂದೂ ಕರೆಯಲ್ಪಡುವ ಈ ಹುಲ್ಲುಗಾವಲು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೂಲಕ ಮಾತ್ರ ತಲುಪಬಹುದು. ಪಹಲ್ಗಾಮ್ ಹತ್ಯಾಕಾಂಡವು ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ನಾಗರಿಕ ದಾಳಿಗಳಲ್ಲಿ ಒಂದಾಗಿದೆ.
ಇನ್ನು ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ. ಭಯೋತ್ಪಾದಕರು ಸುತ್ತಮುತ್ತಲಿನ ಪೈನ್ ಕಾಡುಗಳಿಂದ ಹೊರಬಂದು ಪಿಕ್ನಿಕ್ ಮಾಡುವ, ಕುದುರೆ ಸವಾರಿ ಮಾಡುವ ಅಥವಾ ಆಹಾರ ಮಳಿಗೆಗಳಲ್ಲಿ ತಿನ್ನುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದ್ದರು. ಪರಿಣಾಮವಾಗಿ ವಿದೇಶಿ ಪ್ರಜೆಗಳೂ ಸೇರಿ ಬರೋಬ್ಬರಿ 26 ಮಂದಿ ಅಸುನೀಗಿದ್ದರು. ಇನ್ನು ಈ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಪಾಕ್ ವಿರುದ್ಧ ಕಟ್ಟುನಿಟ್ಟಿನ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಉಗ್ರರನ್ನು ಮಟ್ಟ ಹಾಕಲು ಮತ್ತು ಪಾಕ್‌ಗೆ ತಕ್ಕ ಪಾಠ ಕಲಿಸಲು ಯಾವುದೇ ಕ್ರಮ ಜರುಗಿಸಲು ಮೂರೂ ಸೇನೆಗೆ ಮೋದಿ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ.
