ಬೆಂಗಳೂರು:
‘ಆಪರೇಷನ್ ಸಿಂದೂರ’ ಮೂಲಕ ಪಾಕಿಸ್ತಾನಕ್ಕೆ ಭಾರತ ತಿರುಗೇಟು ಕೊಟ್ಟಿದ್ದಕ್ಕೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಕನ್ನಡದ ಸಿನಿಮಾ ತಾರೆಯರೂ ಕೂಡ ‘ಆಪರೇಷನ್ ಸಿಂದೂರ’ದಂತಹ ದಿಟ್ಟ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಎಕ್ಸ್ ಖಾತೆಯಲ್ಲಿ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನ ಬೆಂಬಲಿಸುವವರಿಗೆ ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ನಿಮ್ಮನ್ನು ಭಾರತದಿಂದ ಒದ್ದು ಹೊರಹಾಕುತ್ತೇವೆ ಎಂದಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಆಪರೇಷನ್ ಸಿಂಧೂರ’ಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಯ ಬಳಿಕ ಧ್ರುವ ಸರ್ಜಾ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭಾರತದೊಳಗಿದ್ದು ಪಾಕಿಸ್ತಾನವನ್ನು ಬೆಂಬಲಿಸುವವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಅವರ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
“ಪಾಕಿಸ್ತಾನದ ಬಗ್ಗೆ ಅನುಕಂಪ ತೋರಿಸುತ್ತಾ ಭಾರತದಲ್ಲಿರುವವರೇ, ನೀವು ಅವರಿಗೆ ಅನುಕಂಪವನ್ನು ತೋರಿಸಿದರೇ ನೀವು ಭಯೋತ್ಪಾದಕರೇ. ನೀವು ಭಾರತಕ್ಕೆ ದ್ರೋಹವನ್ನು ಬಗೆಯಬೇಡಿ. ಭಾರತದಲ್ಲಿ ಇರುವುದು ಭಾರತದ ಮೇಲೆ ನಂಬಿಕೆ ಇಟ್ಟಂತೆ. ನೀವು ಇರುವ ದೇಶವನ್ನು ನೀವು ಪ್ರೀತಿಸಿ, ಇಲ್ಲವೇ ನಿಮ್ಮನ್ನು ಭಾರತದಿಂದ ಹೊರ ಹಾಕುತ್ತೇವೆ. ಜೈ ಹಿಂದ್” ಎಂದು ಧ್ರುವ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದೆ.
ಅಭಿಮಾನಿಗಳು ಧ್ರುವ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪೋಸ್ಟ್‌ನಲ್ಲಿ ಎರಡು ಫೋಟೊಗಳನ್ನು ಕೂಡ ಹಾಕಿದ್ದಾರೆ. ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ ಹತ್ಯೆಗೈದ ಸಂದರ್ಭದ ಫೋಟೋ ಹಾಗೂ ಇನ್ನೊಂದು ಕಡೆ ಆಪರೇಷನ್ ಸಿಂದೂರದ ಚಿತ್ರ ಹಾಕಿದ್ದಾರೆ. ʼಮೋದಿಗೆ ಹೋಗಿ ಹೇಳುʼ ಎಂದು ಭಯೋತ್ಪಾದಕರು ಹೇಳಿದ್ದನ್ನು ಮೊದ; ಚಿತ್ರಕ್ಕೆ ಹಾಗೂ ʼಮೋದಿಗೆ ಹೇಳಲಾಗಿದೆʼ ಎಂದು ಎರಡನೇ ಚಿತ್ರಕ್ಕೆ ಕ್ಯಾಪ್ಷನ್ ಹಾಕಲಾಗಿದೆ. ಎರಡನೇ ಫೋಟೊದಲ್ಲಿ ಮಹಿಳೆಯ ಹಣೆಯ ಮೇಲೆ ಸಿಂದೂರವಿದ್ದು ಜೊತೆಗೆ ಯುದ್ಧ ವಿಮಾನವಿದೆ.
