ಕದನ ವಿರಾಮ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿ ಆರ್ಭಟ….!

ಮುಂಬೈ:

     ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ವಾರಗಟ್ಟಲೆ ಉಂಟಾದ ಉದ್ವಿಗ್ನತೆಯ ನಂತರ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಯಾಗಿದ್ದು, ಸೋಮವಾರ  ಬೆಳಗ್ಗೆ ಮುಂಬೈ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಬಲವಾದ ಏರಿಕೆ ಕಂಡು ಬಂತು . ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ ನ-ಷೇರು ಸೂಚ್ಯಂಕ ಸೆನ್ಸೆಕ್ಸ್, 2,000 ಪಾಯಿಂಟ್‌ಗಳು ಅಥವಾ ಶೇ. 2ರಷ್ಟು ಹೆಚ್ಚಾಗಿ 81,324ಕ್ಕೆ ತಲುಪಿತು. ಇನ್ನು ದೇಶದ ಅಗ್ರ 50 ಕಂಪನಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಸ್ಟಾಕ್ ಎಕ್ಸಚೇಂಜ್‌ (NSE)ನ ಮಾನದಂಡ ನಿಫ್ಟಿ 500 ಪಾಯಿಂಟ್‌ ಹೆಚ್ಚಾಗಿ 24,534 ಗಡಿ ದಾಟಿತು.

     ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷ್‌ ಸಿಂದೂರ್‌ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಅದಾಗ್ಯೂ ಮೇ 10ರಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು. ಅದಾದ ಬಳಿಕ ಪಾಕಿಸ್ತಾನ ಒಪ್ಪಂದ ಉಲ್ಲಂಘಿಸಿ ಗಡಿಗಳಲ್ಲಿ ದಾಳಿ ನಡೆಸಿತು. ಇದನ್ನು ಶಕ್ತವಾಗಿ ಭಾರತ ಎದುರಿಸಿದ್ದು, ಪಾಕ್‌ಗೆ ಕಠಿಣ ಎಚ್ಚರಿಕೆ ನೀಡಿದೆ. ಅದಾದ ಬಳಿಕ ಭಾನುವಾರ ಪಾಕಿಸ್ತಾನದ ಕಡೆಯಿಂದ ಯಾವುದೇ ದಾಳಿ ನಡೆಯದ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬಂತು. ಪರಿಣಾಮವಾಗಿ ಗೂಳಿ ಆರ್ಭಟ ಜೋರಾಗಿದೆ. 

   ಅಮೆರಿಕ-ಚೀನಾ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿನ ಪ್ರಗತಿ ಕೂಡ ಮಾರುಕಟ್ಟೆ ಚೇತರಿಸಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಎನಿಸಿಕೊಂಡಿದೆ. ಹೂಡಿಕೆದಾರರ ಸಂಪತ್ತು 11 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿ 4,27,84,445.04 ಕೋಟಿ ರೂ.ಗೆ ತಲುಪಿದೆ. ಶುಕ್ರವಾರ ಇದು 4,16,51,538 ಕೋಟಿ ರೂ.ಗಳಷ್ಟಿತ್ತು. ಏಷ್ಯಾದ ಮಾರುಕಟ್ಟೆಗಳು ಕೂಡ ಶೇ. 1ರಷ್ಟು ಏರಿದ್ದು, ಹೂಡಿಕೆದಾರರಲ್ಲಿ ಆಶಾವಾದ ಮೂಡಿದೆ.

   ಲಾಭ ಗಳಿಕೆಯಲ್ಲಿ ಅದಾನಿ ಪೋರ್ಟ್ಸ್ ಮುಂಚೂಣಿಯಲ್ಲಿದ್ದು, ಶೇ. 3.88ರಷ್ಟು ಏರಿಕೆಯಾಗಿ 1,357.85 ರೂ.ಗೆ ತಲುಪಿದೆ. ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಲಾರ್ಸೆನ್ & ಟೂಬ್ರೊ, ಬಜಾಜ್ ಫಿನ್‌ಸರ್ವ್, ಎಟರ್ನಲ್, ಪವರ್ ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ತಲಾ ಶೇ. 3ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಸೆನ್ಸೆಕ್ಸ್‌ನಲ್ಲಿ ಸನ್ ಫಾರ್ಮಾ ನಷ್ಟ ಅನುಭವಿಸಿದೆ.

   “ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದಲ್ಲಿನ ಸುಧಾರಣೆಯು ಸೋಮವಾರದ ಆರಂಭಿಕ ವಹಿವಾಟುಗಳಲ್ಲಿ ನಿಫ್ಟಿಗೆ ಲಾಭ ತಂದುಕೊಟ್ಟಿದೆ. ಆದರೆ ಪಾಕಿಸ್ತಾನದ ಕದನ ವಿರಾಮ ಒಪ್ಪಂದ ಮಾರುಕಟ್ಟೆಯನ್ನು ದುರ್ಬಲಗೊಳಿಸುವ ಆತಂಕ ಇದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಮಾತುಕತೆಗಳು ಜಾಗತಿಕ ಭಾವನೆಗಳನ್ನು ಮತ್ತಷ್ಟು ಹೆಚ್ಚಿಸಬಹುದು” ಎಂದು ತಜ್ಞರು ಊಹಿಸಿದ್ದಾರೆ. ಅದಾಗ್ಯೂ ಮಂಗಳವಾರ ಮತ್ತು ಬುಧವಾರ ಬಿಡುಗಡೆಯಾಗಲಿರುವ ಹಣದುಬ್ಬರ ಅಂಕಿ-ಅಂಶಗಳ ಮೇಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಜತೆಗೆ ಸೋಮವಾರ ಕದನ ವಿರಾಮ ಒಪ್ಪಂದದ ಬಗ್ಗೆ ಭಾರತ-ಪಾಕಿಸ್ತಾನ ನಡುವೆ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಜಗತ್ತು ಕುತೂಹಲದಿಂದು ನಿರೀಕ್ಷಿಸುತ್ತಿದೆ.

Recent Articles

spot_img

Related Stories

Share via
Copy link