ಬೆಂಗಳೂರು :
ರಾಜ್ಯದ ರಾಜಧಾನಿಯಲ್ಲಿ ಓಲಾ ಕಂಪನಿಯ ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯಿಂದ, ಈ ಟೆಕ್ಕಿಗೆ ಅತಿಯಾದ ಕೆಲಸದ ಒತ್ತಡವಿತ್ತು ಎಂದು ಗೊತ್ತಾಗಿದೆ. ಇದನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪದವೀಧರರಾದ ನಿಖಿಲ್ ಸೋಮವಂಶಿ ಮೃತ ಟೆಕ್ಕಿ ಎಂದು ಗುರುತಿಸಲಾಗಿದೆ. ಕೋರಮಂಗಲ ಭಾಗದಲ್ಲಿರುವ ಓಲಾದ AI ಘಟಕದಲ್ಲಿ ನಿಖಿಲ್ ಸೋಮವಂಶಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಿಖಿಲ್ ಸೋಮವಂಶಿ ಆಗಸ್ಟ್ 2024ರಲ್ಲಿ ಕೆಲಸಕ್ಕೆ ಸೇರಿದ್ದರು. ಅವರು ವರ್ಷಕ್ಕೆ 9.30 ಲಕ್ಷ ರೂ. ವೇತನ ಪಡೆದುಕೊಳ್ಳುತ್ತಿದ್ದರು. ಆದರೆ, ಅಮೆರಿಕದಲ್ಲಿರುವ ಮ್ಯಾನೇಜರ್ ರಾಜ್ಕಿರಣ್ ಪನುಗಂಟಿ ಎಂಬವರು ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಹಲವು ಕೆಲಸಗಾರರು ಕೆಲಸ ಬಿಟ್ಟಿದ್ದರು. ನಂತರ ಕೆಲಸ ಬಿಟ್ಟ ನೌಕರರ ಕೆಲಸವನ್ನೂ ನಿಖಿಲ್ ಒಬ್ಬರೇ ನಿರ್ವಹಿಸುತ್ತಿದ್ದರು. ಇದರಿಂದ ಕೆಲಸದ ಒತ್ತಡ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
