ಕೋಲಾರ:
ಮೇ 28ರಂದು ನಡೆಯುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಇಬ್ಬರು ಕಾಂಗ್ರೆಸ್ ಶಾಸಕರು ಅವಿರೋಧ ಆಯ್ಕೆ ಆಗಲಿದ್ದಾರೆ.ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆದು ಕೆಜಿಎಫ್ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮತ್ತು ಬಾಗೇಪಲ್ಲಿ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಅಲ್ಲಿನ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.
ಇಬ್ಬರ ಉಮೇದುವಾರಿಕೆ ಅರ್ಜಿಗಳು ಸಹ ಅಂಗೀಕೃತಗೊಂಡಿದ್ದು ನಾಮಪತ್ರಗಳ ವಾಪಸಾತಿಗೆ ಮೇ 23ರವರೆಗೂ ಅವಕಾಶವಿದೆ. ಅಂದು ಇವರಿಬ್ಬರ ಅವಿರೋಧ ಆಯ್ಕೆ ಅಧಿಕೃತವಾಗಿ ಘೋಷಣೆ ಆಗಲಿದೆ.ಉಳಿದಂತೆ 16 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಎರಡು ಜಿಲ್ಲೆಯ ಟಿಎಪಿಸಿಎಂಎಸ್ ಕ್ಷೇತ್ರದಿಂದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸ್ಪರ್ಧಿಸಿದ್ದಾರೆ.
