ಧಾರವಾಡ:
ಕೇಂದ್ರ ಸರ್ಕಾರದ ಅಮೃತ ಭಾರತ ಸ್ಟೇಶನ್ ಯೋಜನೆಯಡಿ ನೈಋತ್ಯ ರೈಲ್ವೆ ವಲಯದ ಧಾರವಾಡ ರೈಲು ನಿಲ್ದಾಣದ ಎರಡನೇ ಪ್ರವೇಶದ್ವಾರದ ನಿಲ್ದಾಣವನ್ನು 17.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿಲಿದ್ದು, ಧಾರವಾಡ ನಿಲ್ದಾಣದಲ್ಲಿ ರಾಜ್ಯಪಾಲರಾದ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ನೈರುತ್ಯ ರೈಲ್ವೆ ವಲಯದ ಪ್ರಧಾನ ಕಾರ್ಯದರ್ಶಿ ಮುಕುಲ್ ಸರನ್ ಮಾಥೂರ್ ಸೇರಿದಂತೆ ಇತರರು ಇದ್ದರು.
ವಿಕಸಿತ ಭಾರತದ ಅಮೃತ ರೈಲು ನಿಲ್ದಾಣಗಳ ಉದ್ಘಾಟನೆ ಕುರಿತಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಪುನರಾಭಿವೃದ್ಧಿಗೊಂಡ 103 ಅಮೃತ ರೈಲ್ವೆ ನಿಲ್ದಾಣಗಳೂ ಸೇರಿದಂತೆ ಕರ್ನಾಟಕ ರಾಜ್ಯದ ಧಾರವಾಡ, ಮುನಿರಾಬಾದ್, ಗದಗ, ಬಾಗಲಕೋಟೆ, ಗೋಕಾಕ ರೋಡ್ ನ 5 ಸುಸಜ್ಜಿತ ಹಾಗೂ ಅತ್ಯಾಧುನಿಕ ವಿನ್ಯಾಸದ ನಿಲ್ದಾಣಗಳನ್ನು ಇಂದು ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಎಲ್ಲಾ ನಿಲ್ದಾಣಗಳನ್ನು ನಗರ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲಾಗಿದ್ದು ವಿಶ್ರಾಂತಿ ಕೊಠಡಿ, ವಿಸ್ತಾರವಾದ ಪ್ರದೇಶ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ‘ವಿರಾಸತ್ ಭೀ ವಿಕಾಸ್ ಭೀ’ ಧ್ಯೇಯದೊಂದಿಗೆ ಸ್ಥಳೀಯ ವಾಸ್ತುಶೈಲಿಯಿಂದ ಪ್ರೇರಿತವಾದ ನಿಲ್ದಾಣಗಳ ಕಟ್ಟಡಗಳಾಗಿದ್ದು ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು, ಉತ್ತಮ ಪಾರ್ಕಿಂಗ್, ಲಿಫ್ಟ್, ಎಸ್ಕಲೇಟರ್, ಎಕ್ಸಿಕ್ಯೂಟಿವ್ ಲಾಂಜ್, ವೈಟಿಂಗ್ ಏರಿಯಾ, ಪ್ರಯಾಣಿಕರು ಹಾಗೂ ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ.
ಅಲ್ಲದೇ ಪರಿಸರ ಸ್ನೇಹಿ ಹಸಿರು ಇಂಧನ ಕ್ರಮಗಳನ್ನು ಅಳವಡಿಸಲಾಗಿದ್ದು ಈ ಉನ್ನತ ರೈಲು ನಿಲ್ದಾಣಗಳಿಂದಾಗಿ ಈ ಎಲ್ಲ ಪ್ರದೇಶಗಳೂ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಲಿವೆ. ಇದು ನಮ್ಮ ಮೋದಿಜೀ ಅವರ ಸರ್ಕಾರದ ಅಭಿವೃದ್ಧಿಯ ಬಗೆಗಿನ ದೂರದೃಷ್ಟಿತ್ವ ಹಾಗೂ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ ಎಂದಿದ್ದಾರೆ.
