ಬೆಂಗಳೂರು:
ಎರಡು ಪ್ರತ್ಯೇಕ ಘಟನೆಗಳಲ್ಲಿ ಒಬ್ಬ ಯುವಕ ಹಾಗೂ ಒಬ್ಬಳು ಯುವತಿ ದಿಡೀರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರೂ 19 ವರ್ಷ ವಯಸ್ಸಿನವರಾಗಿದ್ದು, ಸಣ್ಣ ವಯಸ್ಸಿನ ಯುವಕ ಯುವತಿಯರು ಹೃದಯ ವೈಫಲ್ಯದಿಂದ ಮೃತಪಡುತ್ತಿರುವುದು ಹೆಚ್ಚುತ್ತಿದೆ ಎಂಬ ಕಳವಳಕ್ಕೆ ಮತ್ತೆರಡು ಸಾಕ್ಷಿಯಾಗಿದೆ. ಇಬ್ಬರೂ ಹಾಸನ ಜಿಲ್ಲೆಯವರಾಗಿದ್ದು, ಯುವಕನ ಸಾವು ಬೆಂಗಳೂರಿನಲ್ಲಿ ಸಂಭವಿಸಿದೆ.
ಹೃದಯಾಘಾತದಿಂದ ಯುವತಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್- ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಬಾತ್ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಜೀವ ಹೊರಟುಹೋಗಿದೆ.
ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರಕಲಗೂಡು ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಮೃತನನ್ನು ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ.
ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದು, ಆತನನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗ ಮಧ್ಯೆಯೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.








