ಮಂಗಳೂರು:
ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆ ಮೇ 25ರಂದು ಸಂಜೆ 3.30ಕ್ಕೆ ಬಜಪೆ ಜಂಕ್ಷನ್ ಶಾರದ ಮಂಟಪ ಬಳಿ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ವಾಗ್ಮಿ ಶ್ರೀಕಾಂತ್ ಶೆಟ್ಟಿ ಪ್ರಮುಖ ಭಾಷಣ ಮಾಡುವರು. ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ಮಾತನಾಡಲಿದ್ದಾರೆ. ಮಂಗಳೂರು ಮಹಾನಗರ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿತೈಷಿಗಳು ಈ ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಪಾರ್ಕಿಂಗ್ ವ್ಯವಸ್ಥೆ:
ಎಲ್ಲ ಕಾರ್ಯಕರ್ತರು, ಹಿತೈಷಿ ಬಂಧುಗಳು ಸಂಜೆ 3 ಗಂಟೆಯೊಳಗೆ ಬಜಪೆಯ ಶಾರದಾ ಮಂಟಪವನ್ನು ತಲುಪಬೇಕು. ಮಂಗಳೂರು-ಸುರತ್ಕಲ್-ಕಾವೂರು ಭಾಗದಿಂದ ಬರುವ ವಾಹನಗಳಿಗೆ ಬಜಪೆ ನಾರಾಯಗುರು ಮಂದಿರ ಬಳಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗುರುಪುರ-ವಾಮಂಜೂರು-ಮಳಲಿ ಕಡೆಯಿಂದ ಬರುವ ವಾಹನಗಳಿಗೆ ಸಂಜೀವ ಶೆಟ್ಟಿ ಸಭಾಭವನ ಮತ್ತು ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಮೂಲ್ಕಿ ಮೂಡುಬಿದಿರೆಯಿಂದ ಬರುವ ವಾಹನಗಳಿಗೆ ಯಾದವ್ ಕೋಟ್ಯಾನ್ ಕನ್ನಿಕಾ ನಿಲಯ ಮೈದಾನ ಬಳಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಪಾರ್ಕಿಂಗ್ ಸೂಚನಾ ಫಲಕಗಳನ್ನು ಹಾಕಲಾಗುವುದು ಎಂದರು.ಜನಾಗ್ರಹ ಸಭೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಕಾರ್ಯಕರ್ತರು, ಧರ್ಮಾಭಿಮಾನಿ ಬಂಧುಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಹಿಂದುಗಳ ಬಳಕೆ ಬಗ್ಗೆ ತನಿಖೆಯಾಗಲಿ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಕಳಸದಿಂದ ಇಬ್ಬರು ಹಿಂದುಗಳನ್ನು ಕರೆಸಿ ಬಳಸಿಕೊಳ್ಳಲಾಗಿದೆ. ಸುಹಾಸ್ ಹತ್ಯೆಗೆ 50 ಲಕ್ಷ ರೂ. ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯಿದೆ. ತರಬೇತಿ ಪಡೆದವರೇ ಈ ಹತ್ಯೆ ಮಾಡಿದ್ದಾರೆ ಎಂಬ ಸಂಶಯವಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಎಚ್.ಕೆ. ಪುರುಷೋತ್ತಮ ಆಗ್ರಹಿಸಿದರು.
ಸುಹಾಸ್ ಹತ್ಯೆ ಪ್ರಕರಣದಲ್ಲಿ ಒಟ್ಟು 11 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟುಮಂದಿ ಭಾಗಿಯಾಗಿದ್ದು, ಅವರೆಲ್ಲರ ಬಂಧನ ಆಗಬೇಕಿದೆ. ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಸಹಿತ ಹಿಂದು ಸಂಘಟನೆ ಕಾರ್ಯಕರ್ತರ ಹತ್ಯೆ ನಡೆಸಿದ ಎಲ್ಲ ಆರೋಪಿಗಳು ಬಜ್ಪೆ ಕಿನ್ನಿಪದವಿನಲ್ಲಿ ವಾಸಿಸುವವರಾಗಿದ್ದಾರೆ. ಸುಹಾಸ್ ಹತ್ಯೆ ನಡೆಸಿದವರೂ ಇಲ್ಲಿದ್ದರು. ಈ ಹತ್ಯೆಯಲ್ಲಿ ನಿಷೇಧಿತ ಪಿಎಫ್ಐ ಕೈವಾಡವಿದೆ. ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಸುಹಾಸ್ ಅವರ ತಂದೆ ಮತ್ತು ತಾಯಿ ರಾಜ್ಯಪಾಲರು, ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ಐಎಗೆ ನೀಡಬೇಕು ಎಂದು ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್ ಒತ್ತಾಯಿಸಿದರು.
ಪೊಲೀಸರ ಕಿರುಕುಳ:
ಸುಹಾಸ್ ಹತ್ಯೆ ನಡೆದ ಬಳಿಕ ಹಿಂದು ಸಂಘಟನೆಗಳ ಕಾರ್ಯಕರ್ತರು ಮನೆಯಲ್ಲಿ ಉಳಿದುಕೊಳ್ಳಲು ಪೊಲೀಸರು ಬಿಡುತ್ತಿಲ್ಲ. 10ಕ್ಕೂ ಅಧಿಕ ಮಂದಿ ಕಾರ್ಯಕರ್ತರನ್ನು ಪೊಲೀಸರು ಈಗಾಗಲೇ ಗಡಿಪಾರು ಮಾಡಿದ್ದಾರೆ. ಹಿಂದು ಕಾರ್ಯಕರ್ತರ ಮನೆಗಳಿಗೆ ತೆರಳಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಈ ಕಾರ್ಯ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ನಡೆಯುತ್ತಿದೆ. ಹಿಂದುಗಳನ್ನು ದಮನಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಭುಜಂಗ ಕುಲಾಲ್ ಆರೋಪಿಸಿದರು.
