ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಾದ್ಯಂತ ವರುಣ ನಾನಾ ಅವಾಂತರ ಸೃಷ್ಟಿಸಿದ್ದಾನೆ. ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಕಾಂಪೌಡ್ ಗೋಡೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮತ್ತೊಂದೆಡೆ ಉಳ್ಳಾಲ ತಾಲೂಕಿನ 2 ಕಡೆ ಮನೆಗಳ ಮೇಲೆ ಗುಡ್ಡ ಕುಸಿದಿದೆ.
ಕಾನಕರೆ ನಿವಾಸಿ ನೌಶಾದ್ ಎಂಬುವರ ಪುತ್ರಿ ನಹೀಮಾ (10) ಮೃತ ಬಾಲಕಿ. ನೌಶಾದ ಅವರ ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದು ಮನೆ ಮೇಲೆ ಮಣ್ಣು ಬಿದ್ದಿದೆ. ಮನೆಯ ಕಿಟಕಿ ಬಾಲಕಿಯ ಮೇಲೆ ಬಿದ್ದು ಗಂಭೀರ ಗಾಯಗೊಂಡ ಬಾಲಕಿ ನಹೀಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಉಳ್ಳಾಲ ತಾಲೂಕಿನ ಎರಡು ಕಡೆ ಭಾರೀ ಮಳೆಗೆ ಎರಡು ಕಡೆ ಮನೆಗಳ ಮೇಲೆ ಗುಡ್ಡ ಕುಸಿದಿದೆ. ಮನೆಗಳ ಮೇಲೆ ಗುಡ್ಡ ಕುಸಿದು 6 ಮಂದಿ ಸಿಲುಕಿಕೊಂಡಿದ್ದಾರೆ ಎನ್ನಲಾಗ್ತಿದೆ. ಮೋಂಟೆಪದವು ಬಳಿ ಗುಡ್ಡ ಕುಸಿದು ಐವರು ಸಿಲುಕಿದ್ದು, ಈ ಪೈಕಿ ಇಬ್ಬರ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂವರು ಗುಡ್ಡದಡಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮಗುವನ್ನು ರಕ್ಷಿಸಿದ್ರು. ಸದ್ಯ ಮೋಂಟೆಪದವು ಬಳಿ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆದಿದೆ. ಭಾರೀ ಮಳೆಯಿಂದ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾತ್ರಿ ಇಡೀ ಭಾರೀ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಅಂಗನವಾಡಿಯಿಂದ ಫ್ರೌಡಶಾಲೆಯವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಭಾರೀ ಮಳೆಯಾಗ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಕೊಡಗು, ಹಾಸನ, ವಿಜಯಪುರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ಮೈಸೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.








