ಮುಂಬೈ:
ಭಾರತದ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯ ಮಧ್ಯೆ, ಮಹಾರಾಷ್ಟ್ರದ ಆ್ಯಂಟಿ-ಟೆರರಿಸಂ ಸ್ಕ್ವಾಡ್ ಥಾಣೆಯ ಕಾಲ್ವಾ ನಿವಾಸಿ 27 ವರ್ಷದ ಮೆಕಾನಿಕಲ್ ಎಂಜಿನಿಯರ್ ರವೀಂದ್ರ ವರ್ಮನನ್ನು ಬಂಧಿಸಿದೆ. ಆತನು ಪಾಕಿಸ್ತಾನದ ಏಜೆಂಟ್ಸ್‌ಗಳಿಗೆ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ರೇಖಾಚಿತ್ರಗಳು, ರೇಖಾನಕ್ಷೆಗಳು ಮತ್ತು ಧ್ವನಿ ಟಿಪ್ಪಣಿಗಳ ಮೂಲಕ ಹಂಚಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
2025ರ ಮೇ 28ರಂದು ಬಂಧಿತನಾದ ರವೀಂದ್ರ ವರ್ಮ ಮುಂಬೈಯ ದಕ್ಷಿಣ ಭಾಗದ ನೌಕಾ ಡಾಕ್‌ಯಾರ್ಡ್‌ನಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ನೌಕಾ ಡಾಕ್‌ಯಾರ್ಡ್‌ಗೆ ಆತನಿಗೆ ಪ್ರವೇಶ ಸಿಕ್ಕಿತ್ತು. “ವರ್ಮನು ತಿಳಿದೇ ಸೂಕ್ಷ್ಮ ಮಾಹಿತಿಯನ್ನು ಪದೇ ಪದೆ ಒದಗಿಸಿದ್ದಾನೆ. ಇದಕ್ಕಾಗಿ ಆತನಿಗೆ ಭಾರತ ಮತ್ತು ವಿದೇಶಗಳಿಂದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣ ಸಂದಾಯವಾಗಿದೆ” ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ವರ್ಮನನ್ನು ಫೇಸ್‌ಬುಕ್‌ನಲ್ಲಿ ಮಹಿಳೆಯೆಂದು ಬಿಂಬಿಸಿಕೊಂಡು ಪಾಕಿಸ್ತಾನದ ಗೂಢಚಾರಿಕೆಯವರು ಮೋಸದಿಂದ ಬಲೆಗೆ ಬೀಳಿಸಿದ್ದಾರೆ. 2024ರಿಂದ ಪಾಯಲ್ ಶರ್ಮಾ ಮತ್ತು ಇಸ್‌ಪ್ರೀತ್ ಎಂಬ ಹೆಸರಿನ ಖಾತೆಗಳಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದ ಆತ, ಇವರು ಯುದ್ಧನೌಕೆಗಳ ಮಾಹಿತಿಗಾಗಿ ಭಾರತೀಯ ಯೋಜನೆಯಲ್ಲಿ ಕೆಲಸ ಮಾಡುವವರೆಂದು ಭಾವಿಸಿದ್ದ.
ನೌಕಾ ಡಾಕ್‌ಯಾರ್ಡ್‌ಗೆ ಭೇಟಿ ನೀಡುವಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅನುಮತಿಯಿರಲಿಲ್ಲ. ಹೀಗಾಗಿ, ಕೆಲಸ ಮುಗಿಸಿದ ಬಳಿಕ ವರ್ಮ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ಬಗ್ಗೆ ರೇಖಾಚಿತ್ರಗಳು ಅಥವಾ ರೇಖಾನಕ್ಷೆಗಳನ್ನು ತಯಾರಿಸಿ, ಕೆಲವೊಮ್ಮೆ ಧ್ವನಿ ಟಿಪ್ಪಣಿಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದ. ಈ ನೌಕೆಗಳ ಹೆಸರಗಳನ್ನೂ ಆತ ಪಾಕ್ ಏಜೆಂಟ್‌ಗಳಿಗೆ ಒದಗಿಸಿರಬಹುದು ಎಂದು ಶಂಕಿಸಲಾಗಿದೆ.
ವರ್ಮನಿಗೆ ತಾನು ಮಾಡುತ್ತಿರುವ ಕೃತ್ಯ ಮತ್ತು ಮಾಹಿತಿ ಸ್ವೀಕರಿಸುವವರ ಬಗ್ಗೆ ಪೂರ್ಣ ಜ್ಞಾನವಿತ್ತು. ಹಣಕ್ಕಾಗಿ ಆತ ಈ ಕೃತ್ಯವನ್ನು ಮಾಡಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಎಟಿಎಸ್ ತನಿಖೆಯನ್ನು ಮುಂದುವರಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
