ಚೆನ್ನೈ:
ಡಿಸೆಂಬರ್ನಲ್ಲಿ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿರಿಯಾನಿ ಮಾರಾಟಗಾರನೊಬ್ಬ ತಪ್ಪಿತಸ್ಥನೆಂದು ಸಾಬೀತಾಗಿದೆ. ಐದು ತಿಂಗಳ ವಿಚಾರಣೆಯ ನಂತರ ಚೆನ್ನೈ ಕ್ಯಾಂಪಸ್ನಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ 11 ಆರೋಪಗಳಿಗೂ ಜ್ಞಾನಶೇಖರನ್ ತಪ್ಪಿತಸ್ಥನೆಂದು ಮಹಿಳಾ ನ್ಯಾಯಾಲಯ ಘೋಷಿಸಿದೆ. ಅಪರಾಧಿಗೆ ಶಿಕ್ಷೆಯ ಪ್ರಮಾಣ ಇನ್ನೂ ಘೋಷಣೆ ಆಗಿಲ್ಲ.
ಎಲ್ಲಾ ಆರೋಪಗಳಿಗೂ ಶಿಕ್ಷೆ ವಿಧಿಸಲಾಗಿರುವುದರಿಂದ ಅವನಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಧೀಶೆ ರಾಜಲಕ್ಷ್ಮಿ ಹೇಳಿದರು. ಆದಾಗ್ಯೂ, ಅಪರಾಧಿಯು ತನ್ನ ವೃದ್ಧ ತಾಯಿ ಮತ್ತು ಎಂಟು ವರ್ಷದ ಮಗಳನ್ನು ನೋಡಿಕೊಳ್ಳಬೇಕು ಎಂದು ಹೇಳಿ ಕನಿಷ್ಠ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದಾನೆ.
ವರದಿಗಳ ಪ್ರಕಾರ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿ 19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯು ಆಕೆಯ ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ನಂತರ ಆಕೆ ಡಿಸೆಂಬರ್ 24 ರಂದು (ಮಂಗಳವಾರ) ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಹುಡುಗಿಯ ದೂರಿನ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಗೋವಿ ಚೆಜಿಯಾನ್ ಖಚಿತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ವಿಶ್ವವಿದ್ಯಾಲಯದಲ್ಲಿ ವಿಶೇಷ ಸಮಿತಿಯನ್ನೂ ರಚಿಸಲಾಗಿದ್ದು, ಜೊತೆಗೆ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.
ಪೊಲೀಸರ ಪ್ರಕಾರ, ಆತ ಘಟನೆಯ ವಿಡಿಯೋ ಚಿತ್ರೀಕರಿಸಿ ಇಬ್ಬರನ್ನೂ ಬ್ಲ್ಯಾಕ್ಮೇಲ್ ಮಾಡಿದ್ದ ಎನ್ನಲಾಗಿದೆ. ನಂತರ ಆತನನ್ನು ಗ್ರೇಟರ್ ಚೆನ್ನೈ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಂಧನದ ನಂತರ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕಾರ್ಯಕರ್ತರೊಂದಿಗೆ ಜ್ಞಾನಶೇಖರನ್ ಫೋಟೋ ಕಾಣಿಸಿಕೊಂಡಿತ್ತು.








