ಇಸ್ಲಮಾಬಾದ್:
ಉಗ್ರರ ಜೊತೆ ರಾಜಕಾರಣಿಗಳು ವೇದಿಕೆ ಹಂಚಿಕೊಳ್ಳುತ್ತಾ, ಅವರ ಅಂತ್ಯಕ್ರಿಯೆಯಲ್ಲಿ ಸೇನೆ ಭಾಗಿಯಾಗಿ ಪಾಕಿಸ್ತಾನ ತನ್ನ ಮುಖವಾಡವನ್ನು ತಾನೇ ಕಳಚಿ ಜಗತ್ತಿನ ಮುಂದಿಟ್ಟಿದೆ. ಇದೀಗ ಮತ್ತೆ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ನಾಯಕ ಹಾಗೂ ಪಹಲ್ಗಾಮ್ ದಾಳಿ ಹಿಂದಿನ ರವಾರಿ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಪರವಾಗಿ ಸ್ಥಳೀಯ ರಾಜಕೀಯ ಮುಖಂಡನೊಬ್ಬ ಬಹಿರಂಗವಾಗಿ ಬ್ಯಾಟಿಂಗ್ ನಡೆಸಿದ್ದಾರೆ.
ಪಾಕಿಸ್ತಾನಿ ರಾಜಕಾರಣಿ ಮಲಿಕ್ ಅಹ್ಮದ್ ಖಾನ್ ಅವರನ್ನು ಬೆಂಬಲಿಸಿ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸೈಫುಲ್ಲಾನನ್ನು ಸುಖಾ ಸುಮ್ಮನೆ ದೂಷಿಸಲಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಸಂಪೂರ್ಣ ರಾಜಕೀಯ ವ್ಯವಸ್ಥೆ, ಸರ್ಕಾರ, ಸೇನೆ ಎಲ್ಲವೂ ಉಗ್ರರಿಗೆ ರಕ್ಷಾಕವಚವಾಗಿ ನಿಂತಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಪಾಕಿಸ್ತಾನದಲ್ಲಿರುವ ಪಂಜಾಬ್ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ ಸೈಫುಲ್ಲಾನ ಜೊತೆ ವೇದಿಕೆ ಹಂಚಿದ್ದ ಮಲಿಕ್ ಅಹ್ಮದ್ ಖಾನ್ , ನಂತರ ಪತ್ರಕರ್ತರ ಜೊತೆ ಮಾತನಾಡಿದ್ದಾರೆ. ಈ ವೇಳೆ ಪಹಲ್ಗಾಮ್ ದಾಳಿಗೆ ಭಾರತ ಸುಖಾ ಸುಮ್ಮನೆ ಸೈಫುಲ್ಲಾ ಅವರನ್ನು ಹೊಣೆಯನ್ನಾಗಿಸಿದೆ. ಇದು ಭಾರತದ ತಪ್ಪು ಗ್ರಹಿಕೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವೇ ದಿನಗಳಲ್ಲಿ ಭಾರತೀಯ ಅಧಿಕಾರಿಗಳು ಸೈಫುಲ್ಲಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಯಾವುದೇ ಪುರಾವೆಗಳಿಲ್ಲ ಎಂದು ಖಾನ್ ಹೇಳಿದರು.
ಭಾರತದಲ್ಲಿ ನಡೆದ ವಿವಿಧ ಭಯೋತ್ಪಾದಕ ದಾಳಿಗಳಿಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಅವರು ಆರೋಪಿಸಿದರು ಮತ್ತು ಸೈಫುಲ್ಲಾ ವಿರುದ್ಧದ ಆರೋಪಗಳನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸುವ ಮೂಲಕ ನಾಚಿಕೆ ಇಲ್ಲದೇ ಬಹಿರಂಗವಾಗಿ ಉಗ್ರನ ಪರವಾಗಿ ಖಾನ್ ಸಮರ್ಥನೆಗೆ ಮುಂದಾಗಿದ್ದಾರೆ.
ಮೇ 28 ರ ರ್ಯಾಲಿಯಲ್ಲಿ, ಸೈಫುಲ್ಲಾ ಖಾಲಿದ್ ಭಾರತ, ಹಿಂದೂಗಳು ಮತ್ತು ಭಾರತೀಯ ಜನತಾ ಪಕ್ಷದ ವಿರುದ್ಧ ವಿಷ ಕಾರಿದ್ದ. ಅಲ್ಲದೇ ಭಾರತದ ‘ಆಪರೇಷನ್ ಸಿಂಧೂರ್’ ನಲ್ಲಿ ಕೊಲ್ಲಲ್ಪಟ್ಟ ಪಾಕಿಸ್ತಾನಿ ಭಯೋತ್ಪಾದಕರನ್ನು ಅವರು “ಹುತಾತ್ಮರು” ಎಂದು ಉಲ್ಲೇಖಿಸಿದ್ದ. ಏಪ್ರಿಲ್ 22 ರಂದು ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ ಎಂದು ನನಗೆ ಮಾಹಿತಿ ನೀಡಲಾಯಿತು, ಮತ್ತು ನಂತರ ಭಾರತ ನನ್ನನ್ನು ದಾಳಿಯ ಮಾಸ್ಟರ್ ಮೈಂಡ್ ಎಂದು ಉಲ್ಲೇಖಿಸಿದೆ ಎಂದು ನನಗೆ ತಿಳಿಯಿತು. ಗುಂಡು ಹಾರಿಸುವುದು ಮತ್ತು ಗುಂಡು ಹಾರಿಸುವುದರಿಂದ ನಾವು ಭಯಭೀತರಾಗುವುದಿಲ್ಲ ಮತ್ತು ನಾವು ಹುತಾತ್ಮರಾಗಿ ಸಾಯಲು ಬಯಸುತ್ತೇವೆ” ಎಂದು ಸೈಫುಲ್ಲಾ ಹೇಳಿಕೆ ನೀಡಿದ್ದ.
