ಡ್ರಗ್ಸ್‌ ಪಾರ್ಟಿ : ಮೌನ ಮುರಿದ ಗಾಯಕಿ ಮಂಗ್ಲಿ…!

ಹೈದರಾಬಾದ್

       ಜೂನ್ 10ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ತಾಲೂಕಿನ ಎರ್ಲಪಲ್ಲಿಯ ಫಾರ್ಮ್​ಹೌಸ್​​​ನಲ್ಲಿ ನಡೆದ ಅವರ ಬರ್ತ್​ಡೇ ಪಾರ್ಟಿ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಡ್ರಗ್ಸ್ ಹಾಗೂ ವಿದೇಶಿ ಮದ್ಯ ವಶಕ್ಕೆ ಪಡೆದ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದನ್ನು ಮಂಗ್ಲಿ ಅಲ್ಲಗಳೆದಿದ್ದಾರೆ. ಅಲ್ಲದೆ ಕೆಲವು ವಿಚಾರದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ಅವರು, ಮಾರ್ಗದರ್ಶನಕ್ಕೊಬ್ಬರು ಬೇಕಿತ್ತು ಎಂದಿದ್ದಾರೆ.

   ಜೂನ್ 10ರಂದು ಮಂಗ್ಲಿ ಬರ್ತ್​ಡೇ. ಈ ಕಾರಣಕ್ಕೆ ಅಂದು ರಾತ್ರಿ ಫಾರ್ಮ್​ಹೌಸ್​ನಲ್ಲಿ ಅವರು ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಅವರ ಆಪ್ತರು, ಗೆಳೆಯರು, ಕುಟುಂಬ ಸದಸ್ಯರು ಹಾಗೂ ತಂಡದ ಸದಸ್ಯರು ಇದ್ದರು. ಈ ವೇಳೆ ಮದ್ಯ ಬಳಕೆ ಆಗಿದೆ. ಇಷ್ಟು ದೊಡ್ಡ ಪಾರ್ಟಿ ಮಾಡುವಾಗ ಮತ್ತು ಮದ್ಯ ಕೊಡಲು ಒಪ್ಪಿಗೆ ಪಡೆಯಬೇಕು ಎಂಬ ನಿಯಮ ಇದೆ. ಆದರೆ, ಇದನ್ನು ತೆಗೆದುಕೊಂಡಿಲ್ಲ ಎನ್ನುವ ಬಗ್ಗೆ ಅವರಿಗೆ ಪಶ್ಚಾತಾಪ ಇದೆ.

    ‘ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ಕೂಡ ಹೇಳಿದ್ದಾರೆ’ ಎಂದು ಮಂಗ್ಲಿ ಹೇಳಿದ್ದಾರೆ. ಆ ಜಾಗದ ಮ್ಯಾನೇಜರ್​ ಡ್ರಗ್ಸ್ ಸೇವನೆ ಮಾಡಿದ್ದು ಖಚಿತವಾಗಿದೆ. ಈ ಬಗ್ಗೆ ಮಾತನಾಡಿರುವ ಮಂಗ್ಲಿ, ‘ಅವರು ಬೇರೆಲ್ಲೋ ಡ್ರಗ್ಸ್ ಸೇವನೆ ಮಾಡಿ ಬಂದಿದ್ದಿರಬಹುದು. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. 

    ಮಂಗ್ಲಿ ಅವರು ದೊಡ್ಡ ಪಾರ್ಟಿ ಮಾಡಲು ಯಾವುದೇ ಒಪ್ಪಿಗೆ ಪಡೆದಿರಲಿಲ್ಲ. ಈ ವಿಚಾರ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ವಿದೇಶಿ ಮದ್ಯ ಸಿಕ್ಕಿದೆ ಎನ್ನಲಾಗಿದೆ. ಮಂಗ್ಲಿ ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು, ಡ್ರಗ್ಸ್ ಸೇವನೆ ಮಾಡಿಲ್ಲ ಎಂಬುದು ಅಧಿಕೃತ ಆಗಿದೆ.

Recent Articles

spot_img

Related Stories

Share via
Copy link