ಶಿಲ್ಲಾಂಗ್:
ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿ ಅಲ್ಲಿ ಪತ್ನಿ ನೀಡಿದ ಸುಪಾರಿಯಿಂದಲೇ ಕೊಲೆಯಾದ ಇಂದೋರ್ ನಿವಾಸಿ ರಾಜ ರಘುವಂಶಿ ಪ್ರಕರಣದ ಇಂಚಿಂಚು ಮಾಹಿತಿಯೂ ಇದೀಗ ಹೊರಬರುತ್ತಿದೆ. ಪತ್ನಿ ಸೋನಂ , ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಹೋಗುವಂತೆ ಹಾಗೂ ಅಲ್ಲಿ ನೈವೇದ್ಯ ಅರ್ಪಿಸಿದ ನಂತರವೇ ಮದುವೆಯನ್ನು ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ ಆತನಿಗೆ ಹೇಳಿದ್ದಳು ಎಂದು ತನಿಖಾಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಈ ದೇವಾಲಯ ತಾಂತ್ರಿಕ ಆಚರಣೆ, ಬಲಿಗಳಿಗೆ ಪ್ರಸಿದ್ಧವಾಗಿದೆ.
ಅದರಂತೆ, ರಾಜಾ ಅವರು ಹನಿಮೂನ್‌ಗಾಗಿ ಗುವಾಹಟಿ ಮತ್ತು ಪಕ್ಕದ ಮೇಘಾಲಯಕ್ಕೆ ಪ್ರಯಾಣ ಬೆಳೆಸಲು ಯೋಜಿಸಿದ್ದರು. ಸೋನಂ ಮತ್ತು ಆಕೆಯ ಗೆಳೆಯ ದೂರದ ಈಶಾನ್ಯ ರಾಜ್ಯದ ಕಾಡಿನಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. “ವಿವಾಹವನ್ನು ಪೂರ್ಣಗೊಳಿಸುವ ಮೊದಲು ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ನೈವೇದ್ಯ ಅರ್ಪಿಸಬೇಕೆಂದು ಸೋನಂ ತನ್ನ ಪತಿ ರಾಜಾ ಅವರ ಮನವೊಲಿಸಿದಳು” ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನಂ ಮತ್ತು ರಾಜಾ ಮೇ 11ರಂದು ಇಂದೋರ್‌ನಲ್ಲಿ ವಿವಾಹವಾದರು ಮತ್ತು ಮೇ 20ರಂದು ಅಸ್ಸಾಂನ ಗುವಾಹಟಿ ಮೂಲಕ ಮೇಘಾಲಯಕ್ಕೆ ಬಂದರು. ಇಬ್ಬರೂ ಮೇ 23 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿ ನೊಂಗ್ರಿಯಾಟ್ ಗ್ರಾಮದ ಹೋಂಸ್ಟೇಯಿಂದ ಚೆಕ್ ಔಟ್ ಮಾಡಿದ ಗಂಟೆಗಳ ನಂತರ ನಾಪತ್ತೆಯಾಗಿದ್ದರು.
ಜೂನ್ 2ರಂದು ವೀಸಾವ್ಡಾಂಗ್ ಜಲಪಾತದ ಬಳಿಯ ಕಮರಿಯಲ್ಲಿ ರಾಜಾ ಅವರ ಶವ ಪತ್ತೆಯಾಯಿತು. ಸೋನಂ ನಾಪತ್ತೆಯಾಗಿದ್ದಳು. ಜೂನ್ 9ರ ಮುಂಜಾನೆ ಸುಮಾರು 1,200 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿ ಸೋನಂ ಕಾಣಿಸಿಕೊಂಡಳು. ಪ್ರಕರಣದ ಒಂದೊಂದೇ ವಿವರ ಆಕೆ ಬಾಯಿಬಿಟ್ಟಳು. ನಂತರ ಪೊಲೀಸರು ಆಕೆಯ ಗೆಳೆಯ ರಾಜ್ ಕುಶ್ವಾಹ ಮತ್ತು ರಾಜಾ ಅವರನ್ನು ಕೊಲೆ ಮಾಡಲು ನೇಮಿಸಿದ ಮೂವರು ಗುತ್ತಿಗೆ ಹಂತಕರನ್ನು ಬಂಧಿಸಿದರು.
ಸೋನಂ ತನ್ನ ಗಂಡನನ್ನು ನೋಂಗ್ರಿಯಾಟ್‌ನ ಆಳವಾದ ಕಾಡಿಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದಳು. ಅದು ನಿರ್ಜನ ಪ್ರದೇಶವಾದ್ದರಿಂದ ಮಾರ್ಗದಲ್ಲಿ ಎಲ್ಲೋ ಅವನನ್ನು ಕೊಲ್ಲಲು ಉತ್ತಮ ಅವಕಾಶವಿದೆ ಎಂದು ನಂಬಿದ್ದಳು. ಆದರೆ, ಮೇ 22 ಮತ್ತು ಮೇ 23 ರಂದು ನೊಂಗ್ರಿಯಾಟ್ ಮಾರ್ಗದಲ್ಲಿ ಹಲವಾರು ಚಾರಣಿಗರು ಇದ್ದುದರಿಂದ, ಆ ಪ್ಲಾನ್ ಸಫಲವಾಗಲಿಲ್ಲ. ಕೊನೆಗೆ ಕೊಲೆಗಾರರು ರಘುವಂಶಿಯನ್ನು ವೈಸಾವ್ಡಾಂಗ್ ಜಲಪಾತದ ಬಳಿ ಕೊಂದು, ದೇಹವನ್ನು ಆಳವಾದ ಕಂದಕಕ್ಕೆ ಎಸೆದರು.
ದಂಪತಿಗಳು ಈಶಾನ್ಯ ರಾಜ್ಯಕ್ಕೆ ತಲುಪಿದ ಒಂದು ದಿನದ ನಂತರ, ಮೇ 21 ರಂದು ಗುತ್ತಿಗೆ ಹಂತಕರು ಗುವಾಹಟಿಗೆ ಆಗಮಿಸಿದ್ದರು. ಹಂತಕರು ಗುವಾಹಟಿಯಲ್ಲಿರುವ ತಮ್ಮ ಹೋಟೆಲ್ ಹೊರಗಿನಿಂದ ಮಚ್ಚನ್ನು ಖರೀದಿಸಿದರು. ನಂತರ ರಸ್ತೆ ಮೂಲಕ ಶಿಲ್ಲಾಂಗ್‌ಗೆ ಪ್ರಯಾಣಿಸಿದರು. ಕೊಲೆಯಾದ ದಿನವಿಡೀ ಸೋನಂ ತನ್ನ ಗೆಳೆಯ ರಾಜ್ ಜೊತೆ ಸಂಪರ್ಕದಲ್ಲಿದ್ದಳು. ಆತ ಮೂವರು ಗುತ್ತಿಗೆ ಹಂತಕರೊಂದಿಗೆ ಸಂಪರ್ಕದಲ್ಲಿದ್ದ. ರಾಜಾ ಹತ್ಯೆಯಾದಾಗ ಸೋನಂ ಅಲ್ಲೇ ಇದ್ದಳು ಎಂದು ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ಹೇಳಿದ್ದಾರೆ.
ನಾವು ಸಿಸಿಟಿವಿ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ತನಿಖೆಯನ್ನು ಬಹಳ ಬಿಗಿಯಾಗಿ ಮಾಡಲಾಗುತ್ತಿದೆ ಎಂದಿದ್ದಾರೆ ಸೈಮ್. ಅಪರಾಧದ ನಂತರ ಅಲ್ಲಿಂದ ಓಡಿಹೋದ ಸೋನಂ, ಮಾವ್ಕ್‌ಡಾಕ್‌ನಿಂದ ಶಿಲ್ಲಾಂಗ್‌ಗೆ ಟ್ಯಾಕ್ಸಿ ತೆಗೆದುಕೊಂಡು, ನಂತರ ಗುವಾಹಟಿಗೆ ಪ್ರವಾಸಿ ಕ್ಯಾಬ್ ಅನ್ನು ಬಾಡಿಗೆಗೆ ಪಡೆದು ತೆರಳಿದಳು. ಪತ್ತೆಯಾಗುವುದನ್ನು ತಪ್ಪಿಸಲು ಹಲವಾರು ರೈಲುಗಳನ್ನು ಹತ್ತಿಳಿದಳು. ನೇರವಾಗಿ ಇಂದೋರ್ ತಲುಪಿದ್ದೇನೆ ಎಂದು ಹೇಳಿಕೊಂಡರೂ, ಅದನ್ನು ಇನ್ನೂ ಪರಿಶೀಲಿಸಲಾಗುತ್ತಿದೆ.
ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಡೀ ಘಟನೆಗಳ ಸರಪಣಿಯನ್ನು ಒಟ್ಟುಗೂಡಿಸಲು ಆಯಾ ಸ್ಥಳಗಳಲ್ಲಿ ಕೆಲಸ ಮಾಡುತ್ತಿದೆ. ಸೋನಂ ತಾನು ಮೊದಲು ಮೇಘಾಲಯಕ್ಕೆ ಹೋಗಿಲ್ಲ ಎಂದಿದ್ದಾಳೆ. ಆದರೆ ಆ ಬಗ್ಗೆಯೂ ಅನುಮಾನವಿದೆ. ಎಸ್‌ಐಟಿ ಕಠಿಣ ಆರೋಪಪಟ್ಟಿ ಸಲ್ಲಿಸಲು ಬದ್ಧವಾಗಿದೆ. ಸೋನಂ, ಆಕೆಯ ಗೆಳೆಯ ರಾಜ್ ಮತ್ತು ಮೂವರು ಶಂಕಿತ ಗುತ್ತಿಗೆ ಹಂತಕರಾದ ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರನ್ನು ಶಿಲ್ಲಾಂಗ್‌ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.








