ಚಂಡೀಗಢ:
‘ಕಮಲ್ ಕೌರ್ ಭಾಭಿ’ ಎಂದೇ ಖ್ಯಾತರಾಗಿದ್ದ ಪಂಜಾಬ್‌ನ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಮಲ್ ಕೌರ್ , ಬಟಿಂಡಾದ ಅದೇಶ್ ವೈದ್ಯಕೀಯ ವಿಶ್ವವಿದ್ಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲುಧಿಯಾನಾದಲ್ಲಿ ನೋಂದಾಯಿತವಾದ ಈ ಕಾರಿನಿಂದ ದುರ್ವಾಸನೆ ಬರಲು ಆರಂಭಿಸಿದಾಗ ಸ್ಥಳೀಯರು ಗಮನಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿದ್ದು, ಪೊಲೀಸರು ಈ ಘಟನೆಯನ್ನು “ಸಂದಿಗ್ಧ” ಎಂದು ವಿವರಿಸಿದ್ದಾರೆ.
ಲುಧಿಯಾನಾದ ನಿವಾಸಿಯಾದ ಕಮಲ್ ಕೌರ್, ಸೋಶಿಯಲ್ ಮೀಡಿಯಾದಲ್ಲಿ 3.8 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದರು. ಅವರ ನಿಜವಾದ ಹೆಸರು ಕಾಂಚನ್ ಕುಮಾರಿ. 30 ವರ್ಷದ ಆಕೆ, ಪಂಜಾಬಿನ ಸಾಂಪ್ರದಾಯಿಕ ಮತ್ತು ಸಂಪ್ರದಾಯವಾದಿ ಸಂಸ್ಕೃತಿಗೆ ಸವಾಲು ಹಾಕುವ ವಿಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ಆಕೆಯ ಕಂಟೆಂಡ್ ಅಶ್ಲೀಲವೆಂದು ಕರೆದಿದ್ದರು. ಆ ಮೂಲಕ ಆನ್‌ಲೈನ್‌ನಲ್ಲಿ ನೈತಿಕತೆಯ ಬಗ್ಗೆ ಚರ್ಚೆಗೆ ಆರಂಭವಾಗಿತ್ತು.
2024ರ ಅಕ್ಟೋಬರ್‌ನಲ್ಲಿ ಕೆನಡಾದ ಖಲಿಸ್ತಾನಿ ಉಗ್ರ ಅರ್ಶ್ ದಲ್ಲಾ ವಿಡಿಯೊಗಳನ್ನು ಟಿಲೀಟ್ ಮಾಡದಿದ್ದರೆ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಕೌರ್‌ಗೆ ಧಮ್ಕಿ ಹಾಕಿದ್ದ ಎಂದು ವರದಿಯಾಗಿತ್ತು. ದಲ್ಲಾ ಕೆನಡಾದಲ್ಲಿ ಕೊಲೆಯಾದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ನ ಆಪ್ತ.
“ಕೊಲೆ ಮಅಡಿದ ಬಳಿಕ ಕಾರನ್ನುಇಲ್ಲಿ ಬಿಟ್ಟುಹೋಗಿರುವಂತೆ ಕಾಣುತ್ತದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸ್ಪಷ್ಟತೆ ದೊರೆಯಲಿದೆ. ಕಾರಿನ ನೋಂದಣಿ ಸಂಖ್ಯೆ ನಕಲಿ ಎಂದು ಶಂಕಿಸಲಾಗಿದ್ದು, ಸಾರಿಗೆ ಅಧಿಕಾರಿಗಳಿಂದ ವಿವರ ಕೇಳಲಾಗಿದೆ” ಎಂದು ಬಟಿಂಡಾ ಎಸ್‌ಪಿ (ನಗರ) ನರಿಂದರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೌರ್‌ರ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ಯಾವುದೇ ಭಾವನೆ, ಪ್ರೀತಿ, ಏನೂ ಇಲ್ಲ. ಬಾಕಿಯಿರುವುದು ಕೇವಲ ಶಂಕೆ, ಶಂಕೆ ಮತ್ತು ಶಂಕೆ” ಎಂದು ಬರೆದಿದ್ದರು.








