ಡಿಂಪಲ್‌ ಕ್ವೀನ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು‌ ….!

ಬೆಂಗಳೂರು: 

    ನಟಿ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ದೂರು ದಾಖಲಿಸಿದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ನಟಿ ಬಂದಿಲ್ಲ ಎಂದು ಅವರು ದೂರಿದ್ದಾರೆ. ಸಿನಿಮಾ ಟೀಮ್ ಜೊತೆ ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ನಾಗಶೇಖರ್, ತಮ್ಮದೇ ಸಿನಿಮಾದ ನಾಯಕಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ಸಲ್ಲಿಸಿದರು. ರಚಿತಾ ರಾಮ್‌ ಅವರಿಂದಾಗಿ ನಮ್ಮ ಚಿತ್ರಕ್ಕೆ ಹೊಡೆತ ಬಿದ್ದಿದೆ ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

    ಸಂಜು ವೆಡ್ಸ್ ಗೀತಾ-2 ಚಿತ್ರದ ಪ್ರಚಾರ ಕಾರ್ಯವನ್ನು ಮಾಡಲಾಗುತ್ತಿದೆ. ಆದರೇ ನಟಿ ರಚಿತಾ ರಾಮ್ ಮಾತ್ರ ಪ್ರಚಾರಕ್ಕೆ ಬರುತ್ತಿಲ್ಲ. ಹೀಗಾಗಿ ನಾವು ಇಂಥ ಕಲಾವಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಹಕಾರ ಕೊಟ್ಟಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ. ಹಾಗಾಗಿ ನಟಿಯ ನಡೆಯ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ.

   ನಮ್ಮ ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಸಪೋರ್ಟ್‌ ಮಾಡಿಲ್ಲ. ರಾಕ್‌ಲೈನ್‌ ವೆಂಕಟೇಶ್ ಅವರು ಕೂಡ ಅವರ ಬಳಿ ಮಾತನಾಡಿ ಅವರ ಮನೊಲಿಸಲು ಪ್ರಯತ್ನ ಮಾಡಿದರು. ಆದರೆ ಅದು ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ. ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡರೂ ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವ್ರೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ. ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ. ನಟಿ ರಚಿತಾ ರಾಮ್ ವಿರುದ್ಧ ಹಾಗೂ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ತುಂಬಾ ನಷ್ಟ ಅನುಭವಿಸಿದ್ದೇವೆ ಎಂದು ನಿರ್ದೇಶಕ ಹೇಳಿದರು.

   ಸಂಜು ವೆಡ್ಸ್ ಗೀತಾ-2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್‌ ನಟಿಸಿದ್ದಾರೆ. ಛಲವಾದಿ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

Recent Articles

spot_img

Related Stories

Share via
Copy link