ಭಾರತದ ಅತಿದೊಡ್ಡ ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಂಗಳೂರಿನಲ್ಲಿ ಸಿದ್ಧ

ಮಂಗಳೂರು

   ಭಾರತದ ಅತಿದೊಡ್ಡ ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಂಗಳೂರಿನಲ್ಲಿ ಸಿದ್ಧಗೊಂಡಿದೆ. ಇದರೊಂದಿಗೆ, ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಸದ್ಯ, ವಿಶಾಖಪಟ್ಟಣದಲ್ಲಿರುವ 60 ಸಾವಿರ ಟನ್‌ ಸಂಗ್ರಹ ಸಾಮರ್ಥ್ಯದ ಎಲ್​ಪಿಜಿ ಸಂಗ್ರಹಾಗಾರ ಈವರೆಗೆ ದೇಶದ ಅತಿದೊಡ್ಡ ಸಂಗ್ರಹಾಗಾರವಾಗಿತ್ತು. ಇದೀಗ ಮಂಗಳೂರಿನಲ್ಲಿ ನಿರ್ಮಾಣವಾಗಿರುವ ಸಂಗ್ರಹಾಗಾರ 80,000 ಟನ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗಾಗಿ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಸಂಗ್ರಹಾಗಾರ ಇದಾಗಿದೆ.

    ಈ ಭೂಗತ ಎಲ್​ಪಿಜಿ ಸಂಗ್ರಹಾಗಾರವು ದೇಶದ ಪೆಟ್ರೋಲಿಯಂ ನಿಕ್ಷೇಪಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಲಾಗಿದೆ. 

    ದೇಶದಲ್ಲಿ ಸದ್ಯ 2 ಭೂಗತ ಎಲ್​ಪಿಜಿ ಸಂಗ್ರಹಾಗಾರ ಮಾತ್ರ ಇದ್ದು, ಅದರಲ್ಲಿ ಮಂಗಳೂರಿನದ್ದೂ ಒಂದಾಗಿದೆ. ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಂಗಳೂರಿನ ಸಂಗ್ರಹಾಗಾರ ಬಹಳ ಮಹತ್ವದ್ದಾಗಿದೆ ಎಂದು ಕಂಪನಿ ತಿಳಿಸಿದೆ. ಈ ಸಂಗ್ರಹಾಗಾರವು ಆರು ಲಕ್ಷ ಬ್ಯಾರೆಲ್‌ಗಳು ಅಥವಾ 60 ಮಿಲಿಯನ್ ಲೀಟರ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಸಂಗ್ರಹಿಸಬಹುದು. ಅಷ್ಟೇ ಅಲ್ಲದೆ, 40,000 ಟನ್ ಪ್ರೊಪೇನ್ ಮತ್ತು 60,000 ಟನ್ ಬ್ಯುಟೇನ್ ಅನ್ನು ಸಂಗ್ರಹಿಸುವುದಕ್ಕಾಗಿ ವಿನ್ಯಾಸಗೊಳಿಸಲಾದ ಎರಡು ಪ್ರತ್ಯೇಕ ಭೂಗತ ಕೊಠಡಿಗಳನ್ನು ಒಳಗೊಂಡಿದೆ.

   ಮಂಗಳೂರು ಭೂಗತ ಎಲ್​ಪಿಜಿ ಸಂಗ್ರಹಾಗಾರವನ್ನು 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಎಲ್ಲಾ ಪ್ರಮುಖ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಎಂಇಐಎಲ್ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಇತ್ತೀಚೆಗೆ ಘೋಷಿಸಿತ್ತು. ಅತ್ಯಂತ ನಿರ್ಣಾಯಕ ಹಂತವಾದ ‘ಕ್ಯಾವರ್ನ್ ಆ್ಯಕ್ಸಪ್ಟೆನ್ಸ್ ಟೆಸ್ಟ್ (CAT)’ ಮೇ 9 ರಿಂದ ಜೂನ್ 6 ರವರೆಗೆ ನಡೆದಿದ್ದು, ಯಶಸ್ವಿಯಾಗಿದೆ ಎಂದು ಕಂಪನಿ ತಿಳಿಸಿದೆ. 

   ಅತ್ಯದ್ಭುತವಾಗಿ ವಿನ್ಯಾಸಗೊಳಿಸಲಾದ ಈ ಭೂಗತ ಸಂಗ್ರಹಾಗಾರವು 1,083 ಮೀಟರ್ ಸುರಂಗವನ್ನು ಹೊಂದಿದೆ. ಸಂಗ್ರಹಾಗಾರದ ಎರಡು ಮುಖ್ಯ ಘಟಕಗಳು ಎಸ್​1 ಮತ್ತು ಎಸ್​​2 ಕ್ರಮವಾಗಿ 220 ಮೀಟರ್ ಮತ್ತು 225 ಮೀಟರ್ ಆಳದಲ್ಲಿವೆ.ಇಂಧನ ಪೂರೈಕೆಯಲ್ಲಿನ ಅಡೆತಡೆಗಳ ನಿವಾರಣೆ ಮತ್ತು ಇಂಧನ ಪೂರೈಕೆ ವಿಚಾರದಲ್ಲಿ ರಾಷ್ಟ್ರೀಯ ಸನ್ನದ್ಧತೆಯನ್ನು ಹೆಚ್ಚಿಸುವಲ್ಲಿ ಈ ಸಂಗ್ರಹಾಗಾರವು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Recent Articles

spot_img

Related Stories

Share via
Copy link