ಲೀಡ್ಸ್:
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಚೆಂಡನ್ನು ಬದಲಿಸಲು ಪಂತ್ ಬಯಸಿದ್ದರು. ಆದರೆ ಚೆಂಡನ್ನು ಪರಿಶೀಲಿಸಿದ ಅಂಪೈರ್ ಬದಲಿಸಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಪಂತ್ ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು.
ಪಂದ್ಯದ ವೇಳೆ ಪಂತ್ ಅವರು ಐಸಿಸಿ ನೀತಿಸಂಹಿತೆಯ ವಿಧಿ 2.8 ಉಲ್ಲಂಘಿಸಿರುವುದು ದೃಢಪಟ್ಟಿದೆ. ಈ ವಿಧಿಯು ಅಂತಾರಾಷ್ಟ್ರೀಯ ಪಂದ್ಯವೊಂದರ ವೇಳೆ ಅಂಪೈರ್ ನಿರ್ಧಾರದ ವಿರುದ್ಧ ಆಟಗಾರರು ಮತ್ತು ನೆರವು ಸಿಬ್ಬಂದಿಯ ವರ್ತನೆಗೆ ಸಂಬಂಧಿಸಿದ್ದಾಗಿದೆ. ‘ಪಂತ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಮತ್ತು ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಅವರು ತಪ್ಪು ಒಪ್ಪಿಕೊಂಡಿದ್ದಾರೆ. ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್ ಅವರು ವಿಧಿಸಿದ ನಿರ್ಬಂಧವನ್ನು ಪಂತ್ ಸ್ವೀಕರಿಸಿದ್ದಾರೆ’ ಎಂದು ಐಸಿಸಿ ಹೇಳಿಕೆ ತಿಳಿಸಿದೆ.
ಐಸಿಸಿ ನಿಯಮಗಳ ಪ್ರಕಾರ, ಲೆವೆಲ್ 1 ಉಲ್ಲಂಘನೆಗೆ ಕನಿಷ್ಠ ಅಧಿಕೃತ ವಾಗ್ದಂಡನೆ ಮತ್ತು ಆಟಗಾರನ ಪಂದ್ಯ ಶುಲ್ಕದಿಂದ ಗರಿಷ್ಠ ಶೇ.50ರಷ್ಟು ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.
ಒಬ್ಬ ಆಟಗಾರ, 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ಸ್ ಪಾಯಿಂಟ್ಸ್ ಪಡೆದರೆ, ಅವು ಅಮಾನತು ಪಾಯಿಂಟ್ಸ್ ಆಗಿ ಆಟಗಾರನ ಮೇಲೆ ನಿರ್ಬಂಧ ಹೇರಲು ಅವಕಾಶವಾಗುತ್ತದೆ. ಎರಡು ಅಮಾನತು ಪಾಯಿಂಟ್ಸ್ ಪಡೆದರೆ ಆ ಆಟಗಾರ ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಗೆ ನಿಷೇಧಕ್ಕೆ ಒಳಗಾಗುತ್ತಾನೆ.
