ಚೆನ್ನೈ
ಇಳಯರಾಜ ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಗೆ ಎಲ್ಲರೂ ಮನಸೋತಿದ್ದಾರೆ. ಇಳಯರಾಜ ಅವರು ತಮಿಳುನಾಡಿನವರಾದರೂ ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಕನ್ನಡಿಗರೂ ಅಷ್ಟೇ ಅವರ ಹಾಡುಗಳನ್ನು ಇಷ್ಟಪಡುತ್ತಾರೆ. ಈಗ ಇಳಯರಾಜ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ. ಕನ್ನಡಿಗರೂ ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇಳಯರಾಜ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಅವರು ಅಭಿಮಾನಿಗಳ ಎದುರು ಒಂದು ಪ್ರಶ್ನೆ ಇಟ್ಟಿದ್ದಾರೆ. ‘ನನ್ನ ಪ್ರತಿ ಲೈವ್ ಕಾನ್ಸರ್ಟ್ ವೇಳೆ ನಾನು ಒಂದು ಹಾಡನ್ನು ಹೇಳಬೇಕು ಎಂದರೆ ಅದು ಯಾವ ಹಾಡು ಆಗಿರುತ್ತದೆ’ ಎಂದು ಅವರು ಕೇಳಿದ್ದಾರೆ. ಇದಕ್ಕೆ ವಿವಿಧ ರೀತಿಯ ಕಮೆಂಟ್ಗಳು ಬಂದಿವೆ. ಶಂಕರ್ ನಾಗ್ ನಟನೆಯ ‘ಗೀತಾ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಇಳಯರಾಜ ಅವರೇ. ಈ ಚಿತ್ರದ ‘ಜೊತೆಯಲಿ’ ಹಾಡನ್ನು ಹಾಡಬೇಕು ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ.
ಇನ್ನೂ ಕೆಲವರು, ರಾಜ್ಕುಮಾರ್ ನಟನೆಯ ‘ಜೀವ ಹೂವಾಗಿದೆ, ಭಾವ ಜೇನಾಗಿದೆ’ ಹಾಡನ್ನು ಕೇಳಿದ್ದಾರೆ. ಇಳಯರಾಜ ಅವರಿಗೆ ಕನ್ನಡ ಚಿತ್ರಗಳ ಬಗ್ಗೆ ಭಾರೀ ಪ್ರೀತಿ ಇದೆ. ಕೊಲ್ಲೂರಿನ ಮೂಕಾಂಬಿಕೆಯನ್ನು ಅವರು ತಾಯಿ ಎಂದು ಪರಿಗಣಿಸಿದ್ದಾರೆ. ‘ಕೊಲ್ಲೂರು ಮೂಕಾಂಬಿಕೆ ನನ್ನ ತಾಯಿ’ ಎಂದು ಅವರು ಅನೇಕ ಬಾರಿ ಹೇಳಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ನಾನು ಹೊಸಬನಲ್ಲ ಎಂದು ಅವರು ಅನೇಕ ಬಾರಿ ಹೇಳಿದ್ದು ಇದೆ. ಅಷ್ಟೇ ಅಲ್ಲ, ಅವರು ಕರ್ನಾಟಕಕ್ಕೆ ಬಂದಾಗ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ.








