ಭೂ ಸ್ವಾಧೀನ ಕೈ ಬಿಡಬೇಕು ಎಂದು ಆಗ್ರಹಿಸಿ ದೇವನಹಳ್ಳಿ ಚಲೋ ಹೊರಟ ಕೆಪಿಆರ್‌ಎಸ್ ಸದಸ್ಯರು

ಬಾಗೇಪಲ್ಲಿ:

     ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿಸಿ ರೈತರು ಒಂದು ಸಾವಿರಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಇದರ ಅಂಗವಾಗಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಬಾಗೇಪಲ್ಲಿ ತಾಲ್ಲೂಕು ಕರ್ನಾಟಕ ಪ್ರಾಂತ ರೈತ ಸಂಘದ ನಾಯಕತ್ವದಲ್ಲಿ ತಾಲ್ಲೂಕಿನಿಂದ ಸುಮಾರು ೫೦ ಕ್ಕೂ ಹೆಚ್ಚಿನ ರೈತರು ಪ್ರತಿಭಟನೆ ನಡೆಸಲು ರೈತರು ಹೊರಟಿದ್ದಾರೆ ಎಂದು ಜಿಲ್ಲಾ ಸಂಚಾಲಕ ಚನ್ನರಾಯಪ್ಪ ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ೧೩ ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ರಕ್ಷಿಸಲು ಕೈಗೊಂಡಿರುವ ಹೋರಾಟವು ಈಗ ತೀವ್ರ ಸ್ವರೂಪ ಪಡೆದಿದೆ. ೧೭೭೭ ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸರ್ಕಾರ ವಶಪಡಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನಗಳನ್ನು ಖಂಡಿಸಿ, ರೈತರ ಜಮೀನನ್ನು ಉಳಿಸಿ ಕೊಳ್ಳಲು ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದೇವೆ ಎಂದು ಹೇಳಿದರು. 

    ರಾಜ್ಯ ಕೂಲಿಕಾರ ಸಂಘದ ಮುಖಂಡ ಮುನಿವೆಂಕಟಪ್ಪ ಮಾತನಾಡಿ ೨೦೨೨ರ ಜನವರಿಯಲ್ಲಿ ಆಗಿನ ಬಿಜೆಪಿ ಸರ್ಕಾರ, ಚನ್ನರಾಯಪಟ್ಟಣದ ೧೩ ಗ್ರಾಮಗಳ ೧೭೭೭ ಎಕರೆ ಭೂಮಿಯನ್ನು ಕಂಪನಿಗಳಿಗೆ ಮಾರಲು ಅಧಿಸೂಚನೆ ಹೊರಡಿಸಿತ್ತು. ಈ ಭೂಮಿಯಲ್ಲಿ ೮೦೦ ಕುಟುಂಬಗಳು ವಾಸಿಸುತ್ತಿದ್ದು, ಬಹುತೇಕರು ಕೃಷಿ, ಹೈನುಗಾರಿಕೆ, ಕೋಳಿಸಾಕಣೆಯನ್ನೇ ಜೀವನಾಧಾರ ವಾಗಿಸಿಕೊಂಡಿದ್ದಾರೆ. ಈ ಭೂಮಿಯಲ್ಲಿ ಅವರ ಪೂರ್ವಿಕರ ಸಮಾಧಿಗಳಿದ್ದು, ತೋಟಗಳನ್ನು ಬೆಳೆಸಿ, ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಗಾಗಲೇ ಸುತ್ತಲಿನ ೬೦೦೦ ಎಕರೆ ಭೂಮಿ ಯನ್ನು ವಿಮಾನ ನಿಲ್ದಾಣ ಮತ್ತು ಕಂಪನಿಗಳಿಗೆ ಕೊಟ್ಟಿದ್ದು, ಭೂಮಿ ಕಳೆದುಕೊಂಡವರ ಸ್ಥಿತಿಯನ್ನು ಕಂಡ ರೈತರ ಜಮೀನನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕಿಳಿದಿದ್ದೆವೆ ಎಂದು ಹೇಳಿದರು.

    ಡಿ.ಟಿ.ಮುನಿಸ್ವಾಮಿ ಮಾತನಾಡಿ ೨೦೨೨ರ ಸೆಪ್ಟೆಂಬರ್‌ನಲ್ಲಿ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ, ಹೋರಾಟದ ಪೆಂಡಾಲಿಗೆ ಭೇಟಿ ನೀಡಿ, ‘ಅಧಿಕಾರಕ್ಕೆ ಬಂದರೆ ಈ ಯೋಜನೆ ರದ್ದುಗೊಳಿಸುತ್ತೇನೆ’ ಎಂದು ಭರವಸೆ ನೀಡಿದ್ದರು. ಆ ಭರವಸೆಯಿಂದಾಗಿ ೨೦೨೩ರ ಚುನಾವಣೆ ಯಲ್ಲಿ ರೈತರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಸರ್ಕಾರ ಯಾವುದೇ ಗಟ್ಟಿ ತೀರ್ಮಾನ ಕೈಗೊಂಡಿಲ್ಲ. ಇದೀಗ ಕೆ.ಹೆಚ್.ಮುನಿಯಪ್ಪ ಮತ್ತು ಎಂ.ಬಿ.ಪಾಟೀಲ್‌ ರಂತಹ ನಾಯಕರು ಭೂಸ್ವಾಧೀನಕ್ಕೆ ಸಮರ್ಥನೆ ನೀಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.

   ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳಾದ ಜಿ ಅಶ್ವಥ್ ನಾರಾಯಣ ನರಸಿಂಹ ರೆಡ್ಡಿ. ಸೋಮಶೇಖರ್ ರೆಡ್ಡಿ ಲಕ್ಷ್ಮಣ್ಣ, ವೆಂಕಟರಾಮ್ ರೆಡ್ಡಿ ನಾಗರಾಜ್, ಸೋಮಶೇಖರ್, ರಾಮಾಂಜಿ, ಶ್ರೀನಿವಾಸ ರೆಡ್ಡಿ ಹಾಜರಿದ್ದರು.

Recent Articles

spot_img

Related Stories

Share via
Copy link