ನವದೆಹಲಿ:
ಕೇಂದ್ರ ಸರ್ಕಾರ ಶನಿವಾರ 1989 ರ ಬ್ಯಾಚ್‌ನ ಪಂಜಾಬ್ ಕೇಡರ್‌ನ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಂದಿನ ಕಾರ್ಯದರ್ಶಿಯಾಗಿ ನೇಮಿಸಿದೆ. ಜುಲೈ 1 ರಿಂದ ಮುಂದಿನ ಎರಡು ವರ್ಷಗಳ ಕಾಲ ಅವರು ಭಾರತದ ಪ್ರಮುಖ ಗುಪ್ತಚರ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರ ಅವಧಿ ಮುಗಿದ ಬಳಿಕ ಇವರನ್ನು ಆಯ್ಕೆ ಮಾಡಲಾಗಿದೆ. ಜೈನ್ ಅವರು ಆಪರೇಷನ್ ಸಿಂದೂರ್ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಯುಯಾನ ಸಂಶೋಧನಾ ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.
ಪರಾಗ್ ಜೈನ್ ಪಂಜಾಬ್ ಭಯೋತ್ಪಾದನಾ ದಿನಗಳಲ್ಲಿ ಭಟಿಂಡಾ, ಮಾನ್ಸಾ, ಹೋಶಿಯಾರ್‌ಪುರದಲ್ಲಿ ಸೇವೆ ಸಲ್ಲಿಸಿ ಕಾರ್ಯಾಚರಣೆಯ ಪಾತ್ರ ವಹಿಸಿದ್ದಾರೆ ಮತ್ತು ಹಿಂದೆ ಚಂಡೀಗಢದ ಎಸ್‌ಎಸ್‌ಪಿ ಮತ್ತು ಲುಧಿಯಾನದ ಡಿಐಜಿ ಆಗಿದ್ದರು. 370ನೇ ವಿಧಿಯನ್ನು ರದ್ದುಗೊಳಿಸಿದಾಗ ಮತ್ತು ಆಪರೇಷನ್ ಬಾಲಕೋಟ್ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಧಿಕಾರಿಯಾಗಿದ್ದ ಜೈನ್ ಕೆನಡಾ ಮತ್ತು ಶ್ರೀಲಂಕಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಕೆನಡಾದಲ್ಲಿ ಭಾರತದ ವಿರುದ್ಧ ಖಲಿಸ್ತಾನ ಪ್ರತಿಭಟನೆ ನಡೆಸಿದ್ದಾಗ ಅಂತಹ ಪರಿಸ್ಥಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶ ಬಿಕ್ಕಟ್ಟುಗಳನ್ನು ನಿಭಾಯಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯು ಇದೀಗ ಹೊಸ ಮುಖ್ಯಸ್ಥನನ್ನು ನೇಮಕ ಮಾಡಿದೆ. ಏ 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಬಳಿಕ “ರಾ” ಎಚ್ಚೆತ್ತುಕೊಂಡಿದೆ. ಕಾಶ್ಮೀರದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ.
1968ರಲ್ಲಿ ರಾ ಏಜೆನ್ಸಿಯನ್ನು ಸ್ಥಾಪಿಸಲಾಗಿದ್ದು, ಭಾರತದ ಪ್ರಧಾನ ವಿದೇಶಿ ಗುಪ್ತಚರ ಸಂಸ್ಥೆಯಾಗಿದೆ. ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆ ಮೇಲೆ ಕಣ್ಣಿಡಲು ರಾ ಅನ್ನು ಪ್ರಾರಂಭಿಸಲಾಯಿತು. ಕಳೆದ ಕೆಲವು ದಶಕಗಳಲ್ಲಿ ರಾ ವ್ಯಾಪ್ತಿ ಜಗತ್ತಿನಾದ್ಯಂತ ವಿಸ್ತರಿತವಾಗಿದೆ. ಅಮೆರಿಕದ ಸಿಐಎ ಹಾಗೂ ಬ್ರಿಟನ್‌ನ ಎಂಐ6 ಸಂಸ್ಥೆಗಳಿಗಿಂತ ರಾ ಭಿನ್ನವಾಗಿದ್ದು, ರಕ್ಷಣಾ ಸಚಿವಾಲಯದ ಬದಲಾಗಿ ನೇರವಾಗಿ ಪ್ರಧಾನ ಮಂತ್ರಿಗಳಿಗೆ ರಾ ಸಂಸ್ಥೆ ವರದಿ ಮಾಡುತ್ತದೆ. , ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಸಂಸ್ಥೆಯ ಅಧಿಕಾರಗಳು ಮತ್ತು ಭಾರತದ ವಿದೇಶಾಂಗ ನೀತಿಯಲ್ಲಿ ಅದರ ಪಾತ್ರ ವಿವಿಧ ಪ್ರಧಾನ ಮಂತ್ರಿಗಳ ಅಡಿಯಲ್ಲಿ ಬದಲಾಗುತ್ತಾ ಸಾಗಿದೆ.
