ಟೆಹ್ರಾನ್:
ಇರಾನ್‌ನ ಉನ್ನತ ಶಿಯಾ ಧರ್ಮಗುರು, ಗ್ರ್ಯಾಂಡ್ ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಫತ್ವಾ ಹೊರಡಿಸಿದ್ದು, ಅವರಿಬ್ಬರೂ “ದೇವರ ಶತ್ರು” ಎಂದು ಕರೆದಿದ್ದಾರೆ. ಅಲ್ಲದೇ ವಿಶ್ವಾದ್ಯಂತ ಮುಸ್ಲಿಮರು ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜೆರುಸಲೆಮ್ ಪೋಸ್ಟ್‌ನ ವರದಿಯ ಪ್ರಕಾರ, ಅಯತೊಲ್ಲಾ ನಾಸರ್ ಮಕರೆಮ್ ಶಿರಾಜಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶತ್ರುಗಳು ಎಂದು ಘೋಷಿಸಿ, ಅವರ ಕೃತ್ಯಗಳನ್ನು ಖಂಡಿಸಿ ಅರೇಬಿಕ್ ಭಾಷೆಯಲ್ಲಿ ಫತ್ವಾ ಹೊರಡಿಸಿದ್ದಾರೆ. ಫತ್ವಾದಲ್ಲಿ ಟ್ರಂಪ್ ಮತ್ತು ನೆತನ್ಯಾಹು ಅವರನ್ನು ಮೊಹರೆಬ್ ಎಂದು ಘೋಷಿಸಲಾಗಿದೆ. ಮೊಹರೆಬ್ ಎಂದರೆ ದೇವರ ವಿರುದ್ಧ ಯುದ್ಧ ಮಾಡುವ ವ್ಯಕ್ತಿ. ಇರಾನಿನ ಕಾನೂನಿನ ಪ್ರಕಾರ, ಮೊಹರೆಬ್ ಎಂದು ಗುರುತಿಸಲ್ಪಟ್ಟವರು ಮರಣದಂಡನೆ, ಶಿಲುಬೆಗೇರಿಸುವುದು, ಅಂಗಾಂಗ ಕತ್ತರಿಸುವಿಕೆ ಅಥವಾ ಗಡಿಪಾರು ಎದುರಿಸಬಹುದು.
ಹಿರಿಯ ಇರಾನಿನ ಶಿಯಾ ಮಾರ್ಜಾ ಮುಸ್ಲಿಮರು ಅಥವಾ ಇಸ್ಲಾಮಿಕ್ ರಾಜ್ಯಗಳು ಆ ಶತ್ರುವಿಗೆ ಯಾವುದೇ ಸಹಕಾರ ಅಥವಾ ಬೆಂಬಲವನ್ನು ಹರಾಮ್ ಅಥವಾ ನಿಷೇಧಿಸಲಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಮುಸ್ಲಿಮರು ಈ ಶತ್ರುಗಳಿಗೆ ಅವರ ತಪ್ಪನ್ನು ಮನದಟ್ಟು ಮಾಡಿ ಪಶ್ಚಾತ್ತಾಪ ಪಡುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಫತ್ವಾ ಎಂದರೆ ಇಸ್ಲಾಮಿಕ್ ವಿದ್ವಾಂಸರು ಅಥವಾ ಮುಫ್ತಿಯವರು ನೀಡುವ ಧಾರ್ಮಿಕ ತೀರ್ಪು. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಸ್ಪಷ್ಟವಾದ ಉತ್ತರ ಅಥವಾ ಅಭಿಪ್ರಾಯ ಇಲ್ಲದಿರುವ ಸಂದರ್ಭದಲ್ಲಿ ಫತ್ವಾಗಳ ಅನಿವಾರ್ಯತೆ ಎದುರಾಗುತ್ತದೆ. ಇದು ಇಸ್ಲಾಮಿಕ್ ಸರ್ಕಾರಗಳು ಮತ್ತು ವ್ಯಕ್ತಿಗಳು ಸೇರಿದಂತೆ ಎಲ್ಲಾ ಮುಸ್ಲಿಮರನ್ನು ಅದರ ಜಾರಿಯನ್ನು ಖಚಿತಪಡಿಸಿಕೊಳ್ಳುವಂತೆ ಕರೆ ನೀಡುತ್ತದೆ.
ಹಿಂಸಾಚಾರವನ್ನು ಪ್ರಚೋದಿಸಲು ಇರಾನಿನ ಧರ್ಮಗುರುಗಳು ಫತ್ವಾಗಳನ್ನು ಬಳಸಿದ್ದು ಇದೇ ಮೊದಲಲ್ಲ.ಅತ್ಯಂತ ಕುಖ್ಯಾತ ಪ್ರಕರಣವೆಂದರೆ 1989 ರಲ್ಲಿ ಲೇಖಕ ಸಲ್ಮಾನ್ ರಶೀದಿ ಅವರ ಕಾದಂಬರಿ “ದಿ ಸ್ಯಾಟಾನಿಕ್ ವರ್ಸಸ್” ಬಿಡುಗಡೆಯಾದ ನಂತರ ಅವರ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಆ ಫತ್ವಾ ರಶೀದಿಯನ್ನು ತಲೆಮರೆಸಿಕೊಳ್ಳುವಂತೆ ಮಾಡಿತು. ಅಲ್ಲದೇ ಜಪಾನಿನ ಭಾಷಾಂತರಕಾರರ ಕೊಲೆಗೂ ಈ ಫತ್ವಾ ಕಾರಣವಾಯಿತು ಮತ್ತು ಪುಸ್ತಕದ ಪ್ರಕಾಶಕರ ಮೇಲೆ ಹಲವಾರು ದಾಳಿಗಳಿಗೆ ಕಾರಣವಾಯಿತು. ಇದಾದ ಬಳಿಕ ರಶೀದಿ ಅವರ ಮೇಲೆ 2023 ರಲ್ಲಿ ನ್ಯೂಯಾರ್ಕ್‌ನಲ್ಲಿ ಡೆಡ್ಲಿ ಅಟ್ಯಾಕ್ ನಡೆದಿತ್ತು, ಈ ದಾಳಿಯಲ್ಲಿ ಅವರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು.








