ಇಷ್ಟು ದಾಖಲೆ ಸರಿಗಟ್ಟಿ ಮತ್ತೊಂದು ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಗಿಲ್‌ …..!

ಲಂಡನ್:

    ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಭಾರತ ಟೆಸ್ಟ್​ ತಂಡದ ನಾಯಕ ಹಾಗೂ ಬ್ಯಾಟರ್​ ಶುಭಮಾನ್​ ಗಿಲ್ ಅವರು ಕಳೆದ ಎಜ್​ಬಾಸ್ಟನ್​ ಟೆಸ್ಟ್​ ಒಂದರಲ್ಲೇ ಬರೋಬ್ಬರಿ 34 ದಾಖಲೆಗಳನ್ನು ಅಳಿಸಿಹಾಕಿದ್ದರು. ಇದೀಗ ಅವರು ಉಳಿದ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಕ್ರಿಕೆಟ್‌ ದಂತಕಥೆ ಡಾನ್​ ಬ್ರಾಡ್ಮನ್  ಸೇರಿ ರಾಹುಲ್​ ದ್ರಾವಿಡ್​, ಸುನೀಲ್​ ಗಾವಸ್ಕರ್ ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. 

    ಆಸ್ಟ್ರೆಲಿಯಾದ ಡಾನ್​ ಬ್ರಾಡ್ಮನ್​ 1930ರಲ್ಲಿ ಇಂಗ್ಲೆಂಡ್​ ವಿರುದ್ಧದ ಆಶಸ್​ ಸರಣಿಯ 5 ಟೆಸ್ಟ್​ಗಳಲ್ಲಿ 4 ಶತಕಗಳ ಸಹಿತ 974 ರನ್​ ಸಿಡಿಸಿರುವುದು, ಸರಣಿಯೊಂದರಲ್ಲಿ ದಾಖಲಾಗಿರುವ ಗರಿಷ್ಠ ರನ್​ ವಿಶ್ವದಾಖಲೆಯಾಗಿದೆ. ಇದನ್ನು ಮುರಿಯುವ ಅವಕಾಶ ಗಿಲ್‌ ಮುಂದಿದೆ.​ ಸರಣಿಯ ಉಳಿದ 3 ಪಂದ್ಯಗಳಲ್ಲಿ ಗಿಲ್‌ 390 ರನ್​ ಗಳಿಸಿದರೆ, 95 ವರ್ಷ ಹಳೆಯ ಈ ದಾಖಲೆ ಮುರಿಯಲಿದ್ದಾರೆ. ಅಲ್ಲದೆ ಗಿಲ್​ ಇನ್ನು 415 ರನ್​ ಗಳಿಸಿದರೆ, ಟೆಸ್ಟ್​ ಸರಣಿಯೊಂದರಲ್ಲಿ ಸಾವಿರ ರನ್​ ಗಳಿಸಿದ ವಿಶ್ವದ ಮೊಟ್ಟಮೊದಲ ಬ್ಯಾಟರ್​ ಎನಿಸಲಿದ್ದಾರೆ. ಈ ಮೂಲಕ ಗಿಲ್​ ನಾಯಕನಾಗಿ ಅತಿವೇಗದ ಸಾವಿರ ರನ್​ ಸಿಡಿಸಿದ ಸಾಧನೆಯನ್ನೂ ಮಾಡಬಹುದು. ಬ್ರಾಡ್ಮನ್​ ನಾಯಕನಾಗಿ 11 ಇನಿಂಗ್ಸ್​ಗಳಲ್ಲಿ ಸಾವಿರ ರನ್​ ಗಳಿಸಿದ್ದು ಹಾಲಿ ದಾಖಲೆಯಾಗಿದೆ. 

   ಸರಣಿಯ ಮೊದಲ 2 ಪಂದ್ಯಗಳಲ್ಲೇ 3 ಶತಕಗಳ ಸಹಿತ 585 ರನ್​ ಸಿಡಿಸಿರುವ ಗಿಲ್ 18 ರನ್​ ಗಳಿಸಿದರೆ 23 ವರ್ಷ ಹಿಂದಿನ ರಾಹುಲ್‌ ದ್ರಾವಿಡ್ ಅವರ​ ದಾಖಲೆಯನ್ನು ಮುರಿಯಲಿದ್ದಾರೆ. ರಾಹುಲ್​ ದ್ರಾವಿಡ್​ 2002ರಲ್ಲಿ 4 ಪಂದ್ಯಗಳ ಸರಣಿಯಲ್ಲಿ 602 ರನ್​ ದಾಖಲಿಸಿರುವುದು, ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್​ ಗಳಿಸಿರುವ ಗರಿಷ್ಠ ರನ್​ ಆಗಿದೆ. 

   ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಸುನೀಲ್​ ಗಾವಸ್ಕರ್ ಹೆಸರಿನಲ್ಲಿದೆ. ಅವರು 1970-71ರ ವೆಸ್ಟ್​ ಇಂಡೀಸ್​ ಪ್ರವಾಸದ 4 ಟೆಸ್ಟ್​ಗಳಲ್ಲಿ 4 ಶತಕಗಳ ಸಹಿತ 774 ರನ್​ ಸಿಡಿಸಿದ್ದರು. ಈ ದಾಖಲೆ ಮುರಿಯಲು ಗಿಲ್‌ಗೆ​ ಇನ್ನು 190 ರನ್​ ಅಗತ್ಯವಿದೆ. ಈ ಮೇಲುಗಲ್ಲು ತಲುಪಿದರೆ ಗಾವಸ್ಕರ್​ ಅವರ 54 ವರ್ಷ ಹಳೆಯ ದಾಖಲೆ ಪತನಗೊಳ್ಳಲಿದೆ.

   ಇದು ಮಾತ್ರವಲ್ಲದೆ ಭಾರತೀಯ ನಾಯಕನೊಬ್ಬ ಸರಣಿಯೊಂದರಲ್ಲಿ ಗಳಿಸಿರುವ ಗರಿಷ್ಠ ರನ್​ ದಾಖಲೆಗೆ ಗಿಲ್‌ಗೆ​ ಇನ್ನು 148 ರನ್​ ಬೇಕಿದೆ. ಸದ್ಯ ದಾಖಲೆ ಗಾವಸ್ಕರ್ ಹೆಸರಿನಲ್ಲಿದೆ. ಅವರು​ 1978-79ರಲ್ಲಿ ವಿಂಡೀಸ್​ ಎದುರಿನ 6 ಟೆಸ್ಟ್​ಗಳಲ್ಲಿ 732 ರನ್​ ಗಳಿಸಿದ್ದರು.

Recent Articles

spot_img

Related Stories

Share via
Copy link