ಕಾಬುಲ್:
ಐಸಿಸಿ ಅಂತಾರಾಷ್ಟ್ರೀಯ ಅಂಪೈರ್‌ಗಳ ಸಮಿತಿಯ ಸದಸ್ಯರಾಗಿದ್ದ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅವರು 41 ನೇ ವಯಸ್ಸಿನಲ್ಲಿ ನಿಧನರಾದರು. ಸಹೋದರ ನೀಡಿದ ಮಾಹಿತಿ ಪ್ರಕಾರ ಶಿನ್ವಾರಿ ಹೊಟ್ಟೆಯ ಕೊಬ್ಬನ್ನು ಕರಗಿಸುವ ಸಲುವಾಗಿ ಚಿಕಿತ್ಸೆಗೆ ಪಾಕಿಸ್ತಾನದ ಪೆಶಾವರ್‌ಗೆ ಪ್ರಯಾಣ ಬೆಳೆಸಿದ್ದಾಗಿ, ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನ ಮೂಲದ ಶಿನ್ವಾರಿ 34 ಏಕದಿನ ಪಂದ್ಯಗಳು, 26 ಟಿ20ಗಳು, 31 ಪ್ರಥಮ ದರ್ಜೆ, 51 ಲಿಸ್ಟ್ ಎ ಮತ್ತು 96 ದೇಶೀಯ ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಶಿನ್ವಾರಿ ನಿಧನಕ್ಕೆ ಆಫ್ಘಾನ್ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ.
“ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಮತ್ತು ಹೊಟ್ಟೆಯ ಕೊಬ್ಬನ್ನು ತೆಗೆಯಲು ಪೇಶಾವರಕ್ಕೆ ಹೋದರು. ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ದುರದೃಷ್ಟವಶಾತ್, ಶಸ್ತ್ರಚಿಕಿತ್ಸೆಯ 5 ಗಂಟೆ ನಂತರ ಅವರು ನಿಧನರಾದರು” ಎಂದು ಶಿನ್ವಾರಿ ಸಹೋದರ ಸೆಯ್ದಾ ಜಾನ್ ಮಾಧ್ಯಮಗಳಿಗೆ ತಿಳಿಸಿದರು.
ಡಿಸೆಂಬರ್ 2017 ರಲ್ಲಿ ಶಾರ್ಜಾದಲ್ಲಿ ಅಫಘಾನಿಸ್ತಾನ ಮತ್ತು ಐರ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂಪೈರ್ ಆಗಿ ಪದಾರ್ಪಣೆ ಮಾಡಿದ್ದರು..ಶಿನ್ವಾರಿ ಅವರ ಅಂತ್ಯಕ್ರಿಯೆ ನಂಗರ್ಹಾರ್ ಪ್ರಾಂತ್ಯದ ಅಚಿನ್ ಜಿಲ್ಲೆಯಲ್ಲಿ ನಡೆಯಿತು. ಅವರು ಪತ್ನಿ, ಐದು ಗಂಡು ಮತ್ತು ಏಳು ಹೆಣ್ಣುಮಕ್ಕಳನ್ನು ಅಗಲಿದ್ದಾರೆ ಎಂದು ಅಫ್ಘಾನಿಸ್ತಾನದ ಟೋಲೊ ನ್ಯೂಸ್ ವರದಿ ಮಾಡಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಬಿಸ್ಮಿಲ್ಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಆಟಕ್ಕೆ ಅವರ ಕೊಡುಗೆಗಳು ಅಪಾರವಾಗಿದ್ದು, ಕ್ರಿಕೆಟ್ ಸಮುದಾಯ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ಈ ನಷ್ಟದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಸಂತಾಪ ಸೂಚಿಸುತ್ತೇವೆ’ ಎಂದು ಶಾ ಐಸಿಸಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
